Header Ads
Breaking News

ಮೂಲಭೂತ ಸೌಕರ್ಯ ವಂಚಿತ ಕುಟುಂಬಕ್ಕೆ ಗ್ರಾ.ಪಂ. ಮತ್ತು ತಾಲೂಕು ಆಡಳಿತದಿಂದ ನೆರವಿನ ಭರವಸೆ

ಪುತ್ತೂರು: ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೊಳ್ಯ ಎಂಬಲ್ಲಿ ವಾಸಿಸುತ್ತಿರುವ ಮೂಲಭೂತ ಸೌಲಭ್ಯ ವಂಚಿತ ಕುಟುಂಬಕ್ಕೆ ಗ್ರಾಮ ಪಂಚಾಯತ್, ತಾಲೂಕು ಆಡಳಿತದಿಂದ ಸಂಪೂರ್ಣ ನೆರವಿನ ಭರವಸೆ ದೊರಕಿದ್ದು, ಬಡ ಕುಟುಂಬದಲ್ಲಿ ಹೊಸ ಬದುಕಿನ ಆಶಾಕಿರಣ ಮೂಡಿದೆ.

ಪತಿ ನಾರಾಯಣ ನಾಯ್ಕ್, ಪತ್ನಿ ಹರಿಣಾಕ್ಷಿ ಮತ್ತು ಓರ್ವ ಪುತ್ರಿ ಪ್ರತಿಜ್ಞಾ ಅವರನ್ನು ಒಳಗೊಂಡಿರುವ ಬಡ ಪುಟ್ಟ ಕುಟುಂಬಕ್ಕೆ ಕೂಲಿ ಕೆಲಸವೇ ಜೀವನಾಧಾರವಾಗಿದ್ದು, ಕಳೆದ ಫೆ.22 ರಂದು ಪುತ್ತೂರಿನ ಎಲ್ಲೆಡೆಯೂ ಭಾರೀ ಮಳೆ. ರಾತ್ರಿ 8.30ಕ್ಕೆ ಈ ಭಾರೀ ಮಳೆಗೆ ಈ ಬಡ ಕುಟುಂಬದ ಮನೆಯ ಮೇಲೆ ಮರವೊಂದು ಅಪ್ಪಳಿಸಿತು. ಈ ಸಂದರ್ಭ ತಾಯಿ, ಮಗಳು ಮನೆಯೊಳಗಡೆ ಇದ್ದರೂ ಅಪಾಯದಿಂದ ಪಾರಾಗಿದ್ದರು. ಇದಾದ ಬಳಿಕ ಪಂಚಾಯತ್‍ನವರು ಬಂದು ಮನೆಯ ಫೋಟೋ ತೆಗೆದುಕೊಂಡು ಮನೆ ಹಾನಿಗೆ ಸರಕಾರದಿಂದ ಪರಿಹಾರ ಸಿಗುತ್ತದೆ ಎಂದೆಲ್ಲಾ ಹೇಳಿ ಹೋಗಿದ್ದರು.

ಆದರೆ, ಪ್ರಕೃತಿ ವಿಕೋಪ ನಿಧಿಯಡಿ ಪರಿಹಾರ ದೊರಕುವುದೆಂಬ ನಿರೀಕ್ಷೆಯಲ್ಲಿದ್ದ ಈ ಬಡ ಕುಟುಂಬಕ್ಕೆ ಘಟನೆ ನಡೆದು ಸುಮಾರು ಎರಡೂವರೆ ತಿಂಗಳಾಗುತ್ತಾ ಬಂದರೂ ಸರಕಾರದಿಂದ ಚಿಕ್ಕಾಸೂ ದೊರಕಲಿಲ್ಲ. ಇದ್ದ ಬದ್ದವರಲ್ಲಿ ಹೇಳಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪಂಚಾಯತ್‍ನಲ್ಲಿ ಕೇಳಿದರೆ, ಪರಿಹಾರ ಮೊತ್ತ ಜಿಲ್ಲಾ ಪಂಚಾಯತ್‍ನಿಂದ ಬಿಡುಗಡೆ ಆಗಬೇಕಾಗಿದೆ ಎಂದು ಸಬೂಬು ನೀಡುತ್ತಾ ಬರುತ್ತಿದ್ದರು.

ಮಳೆ ಗಾಳಿಗೆ ಮರ ಬಿದ್ದು ಹಾನಿಗೊಳಗಾಗಿದ್ದ ನಾರಾಯಣ ನಾಯ್ಕ್ ಅವರ ಮುರಕಲು ಮನೆಯನ್ನು ವೀಕ್ಷಿಸಲು ಸೋಮವಾರ ಪುತ್ತೂರು ತಹಶೀಲ್ದಾರ್ ರಮೇಶ್‍ಬಾಬು ಮತ್ತು ಸಿಬಂದಿಗಳು ತೆರಳಿದ್ದರು. ಬಡ ಕುಟುಂಬದ ಮನೆಯ ದುಃಸ್ಥಿತಿಯನ್ನು ಕಂಡು ಖೇದ ವ್ಯಕ್ತಪಡಿಸಿದ ರಮೇಶ್‍ಬಾಬು, ಒಂದು ವಾರದೊಳಗೆ ಮನೆ ದುರಸ್ತಿಗೆ ಸಹಾಯಧನವನ್ನು ಬಿಡುಗಡೆಗೊಳಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ಮನೆ ಮಂದಿಗೆ ಭರವಸೆ ನೀಡಿದರು.ಇದೆ ಸಂದರ್ಭದಲ್ಲಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಗಿರಿಧರ್ ನಾಯ್ಕ್ ಅವರು ಕೂಡಲೇ ವರದಿ ಮಾಡಿದ ಮಾದ್ಯಮಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Related posts

Leave a Reply

Your email address will not be published. Required fields are marked *