Header Ads
Breaking News

ಕೊರೊನಾ ಪಾಸಿಟಿವ್ ಬಂದು ಮೃತರಾದ ವ್ಯಕ್ತಿಯ ಅಂತ್ಯಸಂಸ್ಕಾರ ರುದ್ರಭೂಮಿಯಲ್ಲಿ ನಡೆಸಲು ವಿರೋಧ

ಕೊರೊನಾ ಪಾಸಿಟಿವ್ ಬಂದು ಮೃತರಾದ ಬೆಳ್ಳಾರೆಯ ತಡಗಜೆಯ ನಿವಾಸಿಯೊಬ್ಬರ ಅಂತ್ಯಸಂಸ್ಕಾರವನ್ನು ಗೌರಿಹೊಳೆಯ ರುದ್ರಭೂಮಿಯಲ್ಲಿ ನಡೆಸಲು ಗೌರಿಹೊಳೆ ನಿವಾಸಿಗಳು ವಿರೋಧಿಸಿದ ಹಿನ್ನೆಲೆಯಲ್ಲಿ ಶವಸಂಸ್ಕಾರವನ್ನು ಸುಳ್ಯದ ಕೊಡಿಯಾಲಬೈಲು ಹಿಂದು ರುದ್ರಭೂಮಿ ವಿಮುಕ್ತಿಧಾಮಕ್ಕೆ ಸ್ಥಳಾಂತರಗೊಂಡು ಅಲ್ಲಿ ಅಂತ್ಯ ಸಂಸ್ಕಾರ ನಡೆದ ಘಟನೆ ನಡೆದಿದೆ.  

ಬೆಳ್ಳಾರೆ ತಡಗಜೆಯ ವ್ಯಕ್ತಿಯೋರ್ವರು ಅಸೌಖ್ಯದಿಂದ ನಿನ್ನೆ ಮುಂಜಾನೆ ನಿಧನರಾಗಿದ್ದಾರೆ. ಇವರ ಕೊರೊನಾ ವರದಿಯು ಪಾಸಿಟಿವ್ ಆಗಿತ್ತು.ಇವರ ಅಂತ್ಯಸಂಸ್ಕಾರವನ್ನು ಬೆಳ್ಳಾರೆ ಗೌರಿಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿಸಲು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ನಿರ್ಧರಿಸಿ ಗೌರಿಹೊಳೆಗೆ ಬಂದು ಸಿದ್ಧತೆ ಮಾಡತೊಡಗಿದರು.

ಕೊರೋನ ರೋಗಿಯ ಮೃತದೇಹವನ್ನು ಇಲ್ಲಿಯ ಸ್ಮಶಾನಕ್ಕೆ ತರುತ್ತಾರೆಂಬ ಮಾಹಿತಿ ದೊರತ ತಕ್ಷಣ ಸ್ಥಳೀಯ ನಿವಾಸಿಗಳು ಸೇರಿ, ಮೃತದೇಹವನ್ನು ಇಲ್ಲಿ ಅಂತ್ಯಸಂಸ್ಕಾರ ಮಾಡಬಾರದು. ಇಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ. ರುದ್ರಭೂಮಿ ಅಭಿವೃದ್ಧಿಯಾಗಿಲ್ಲ, ವ್ಯವಸ್ಥಿತವಾದ ಕಟ್ಟಡಗಳಿಲ್ಲ. ಆದುದರಿಂದ ಇಲ್ಲಿ ಅಂತ್ಯಸಂಸ್ಕಾರ ಮಾಡಬಾರದೆಂದು ವಿರೋಧ ವ್ಯಕ್ತಪಡಿಸಿದರು.

ಬೆಳ್ಳಾರೆ ಪೊಲೀಸರು ಕೂಡ ಸ್ಥಳಕ್ಕೆ ಬಂದು ಮನವೊಲಿಸಲು ಪ್ರಯತ್ನ ಮಾಡಿದರೂ ಫಲ ನೀಡಲಿಲ್ಲ ಕೊನೆಗೆ ಮೃತ ವ್ಯಕ್ತಿಯ ಮನೆಯವರು ಮೃತದೇಹದ ಹೆಸರಿನಲ್ಲಿ ಗಲಾಟೆ ಮಾಡಬೇಡಿ,ಅಂತ್ಯ ಸಂಸ್ಕಾರ ಬೇರೆ ಕಡೆ ಮಾಡಿಸಿ ಎಂದು ವಿನಂತಿಸಿದ್ದಾರೆ. ನಂತರದಲ್ಲಿ ಮೃತ ದೇಹವನ್ನು ಸುಳ್ಯ ಬಳಿಯ ಉಬರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಿಯಾಲಬೈಲು ಹಿಂದೂ ರುದ್ರ ಭೂಮಿಗೆ ಕೊಂಡೊಯ್ದು ಅಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Related posts

Leave a Reply

Your email address will not be published. Required fields are marked *