Header Ads
Breaking News

ಹಳೆಯಂಗಡಿಯಲ್ಲಿ ಸಿಡಿಲು ಬಡಿದು ಗಂಭೀರ ಗಾಯಗೊಂಡಿದ್ದ ಬಾಲಕ ಮೃತ್ಯು

ಹಳೆಯಂಗಡಿ ಸಮೀಪದ ಇಂದಿರಾನಗರ ಎಂಬಲ್ಲಿ ಆಟವಾಡುತ್ತಿದ್ದ ಇಬ್ಬರು ಬಾಲಕರಿಗೆ ಸಿಡಿಲು ಬಡಿದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಮಂಗಳವಾರ ಸಂಜೆ ದಾಖಲಿಸಲಾಗಿದ್ದು, ಓರ್ವ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾನೆ.ಮೃತ ಬಾಲಕನನ್ನು ಉಡುಪಿ ಜಿಲ್ಲೆಯ ಹೆಜಮಾಡಿ ನಿವಾಸಿ ಮನ್ಸೂರ್ ಎಂಬವರ ಮಗ ನಿಹಾನ್ (5) ಎಂದು ಗುರುತಿಸಲಾಗಿದೆ.
ಸಿಡಿಲಾಘಾತದಿಂದ ಇನ್ನೋರ್ವ ಬಾಲಕ ಉತ್ತರ ಕರ್ನಾಟಕದ ಗಂಗಾವತಿ ಮೂಲದ ದುರ್ಗಪ್ಪ ರವರ ಮಗ ಮಾರುತಿ (6) ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.
ಮುಲ್ಕಿ ಸಮೀಪದ ಹಳೆಯಂಗಡಿ ಇಂದಿರಾನಗರದ ಬೊಳ್ಳೂರು ಮಸೀದಿ ಹಿಂಭಾಗದಲ್ಲಿರುವ ಮನೆಯ ಮುಂಭಾಗ ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಐದರಿಂದ ಆರು ಪುಟ್ಟ ಮಕ್ಕಳು ಆಟವಾಡುತ್ತಿದ್ದಾಗ ಏಕಾಏಕಿ ಸಿಡಿಲು ಬಡಿದಿದ್ದು, ಈ ಸಂದರ್ಭ ನಿಹಾನ್ ಹಾಗೂ ಮಾರುತಿ ಎಂಬ ಬಾಲಕರಿಗೆ ಸಿಡಿಲು ಬಡಿದಿದ್ದರೆ ಉಳಿದ ಮಕ್ಕಳು ಭಯಭೀತರಾಗಿ ಓಡಿ ಹೋಗಿದ್ದಾರೆ.

ತಕ್ಷಣ ಸ್ಥಳೀಯರ ಸಹಾಯದಿಂದ ಮಕ್ಕಳಿಬ್ಬರನ್ನು ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ನಿಹಾನ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಹಾನ್ ಮತಪಟ್ಟಿದ್ದಾನೆ.ಹೆಜಮಾಡಿಯ ಮನ್ಸೂರು ವೃತ್ತಿಯಲ್ಲಿ ಟೈಲರ್ ಆಗಿದ್ದು, ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. ಪುತ್ರ ನಿಹಾನ್ ಪಡುಬಿದ್ರಿ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದು, ಹಳೆಯಂಗಡಿ ಇಂದಿರಾನಗರದ ಬೊಳ್ಳೂರು ಮಸೀದಿ ಬಳಿಯ ತಮ್ಮ ಪತ್ನಿ ಮನೆಗೆ ರಮಝಾನ್ ಉಪವಾಸ ದಿನದಲ್ಲಿ ಬಂದಿದ್ದರು ಎನ್ನಲಾಗಿದೆ. ಬಾಲಕ ನಿಹಾನ್ ಸಾವಿನಿಂದ ಮನೆಯಲ್ಲಿ ಶೋಕ ಮಡುಗಟ್ಟಿದ್ದು ಮನೆಯವರ ಆಕ್ರಂದನ ಮುಗಿಲುಮುಟ್ಟಿದೆ.

ಆಸ್ಪತ್ರೆಗೆ ಕೆಪಿಸಿಸಿ ಕೋಆರ್ಡಿನೇಟರ್ ವಸಂತ್ ಬೆರ್ನಾಡ್, ಹಳೆಯಂಗಡಿ ಗ್ರಾಪಂ ಉಪಾಧ್ಯಕ್ಷ ಅಶೋಕ, ಸದಸ್ಯ ಅಬ್ದುಲ್ ಅಜೀಜ್, ಅಬ್ದುಲ್ ಖಾದರ್, ಪದ್ಮಾವತಿ ಶೆಟ್ಟಿ, ಹಳೆಯಂಗಡಿ ಗ್ರಾಮಕರಣಿಕ ಮೋಹನ್ ಮತ್ತಿತರರು ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *