ಕುಕ್ಕೆ ದೇವಳಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ
ಕಡಬ: ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಕ್ಷೇತ್ರಕ್ಕೆ ಆಗಮಿಸಿದ ಸಚಿವರು ಶ್ರೀ
ದೇವರ ದರುಶನ ಪಡೆದು ಸಂಕಲ್ಪ ನೆರವೇರಿಸಿ ವಿಶೇಷ ಸೇವೆ ಸಮರ್ಪಿಸಿದರು. ಶ್ರೀ ದೇವಳದ ಅರ್ಚಕ ರಾಮಕೃಷ್ಣ ನೂರಿತ್ತಾಯರು ಸಚಿವರಿಗೆ ಶಾಲು ಹೊದಿಸಿ
ಮಹಾಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರಿಗೆ ಕೂಡಾ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು. ಬಳಿಕ ಸಚಿವದ್ವಯರು ಆದಿ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ
ಪಡೆದು ಪ್ರಸಾದ ಸ್ವೀಕರಿಸಿದರು.
ಕ್ಷೇತ್ರಕ್ಕೆ ಆಗಮಿಸಿದ ಸಚಿವರನ್ನು ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಸ್ವಾಗತಿಸಿ ಬರಮಾಡಿಕೊಂಡರು. ಈ ಸಂದರ್ಭ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಶೋಭಾ ಗಿರಿಧರ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಮನೋಜ್ ಸುಬ್ರಹ್ಮಣ್ಯ, ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ, ಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ಅರವಿಂದ ಉಪಸ್ಥಿತರಿದ್ದರು.