ಕೆಟ್ಟು ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿ: ದುರಸ್ಥಿ ಮಾಡುತ್ತಿದ್ದ ಇಬ್ಬರು ಸ್ಥಳದಲ್ಲಿ ಸಾವು- ಓರ್ವ ಗಂಭೀರ

ಪುತ್ತೂರು; ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ರಸ್ತೆ ಪಕ್ಕ ಕೆಟ್ಟು ನಿಂತಿದ್ದ ಲಾರಿಯೊಂದಕ್ಕೆ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ದುರಸ್ಥಿ ಕೆಲಸ ಮಾಡುತ್ತಿದ್ದ ಮೂವರ ಪೈಕಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.


ಮೃತ ಪಟ್ಟ ಓರ್ವನನ್ನು ಮಧು (36) ಎಂದು ಹೇಳಲಾಗಿದೆ. ಈತ ಶಿವಮೊಗ್ಗ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಮೆಕಾನಿಕ್ ಆಗಿರುವ ಮಹಮ್ಮದ್ ಅಫ್‌ಜಲ್( 40) ಗಂಭೀರವಾಗಿ ಗಾಯಗೊಂಡಿದ್ದು, ಈತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋರ್ವ ಮೃತಪಟ್ಟ ವ್ಯಕ್ತಿ ಈತನ ಸಹಾಯಕನಾಗಿದ್ದು, ಆತನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಬೆದ್ರೋಡಿ ಬಸ್ ಸ್ಟ್ಯಾಂಡ್ ಪಕ್ಕ ಲಾರಿಯೊಂದು ಕೆಟ್ಟು ನಿಂತಿದ್ದು. ಇದರ ಗೇರ್ ಬಾಕ್ಸ್ ರಿಪೇರಿ ಕೆಲಸ ನಡೆಯುತ್ತಿತ್ತು. ಈ ವೇಳೆ ಉಪ್ಪಿನಂಗಡಿ ಕಡೆಯಿಂದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಲಾರಿಯ ದುರಸ್ಥಿ ಕೆಲಸದಲ್ಲಿ ನಿರತರಾಗಿದ್ದ ಇಬ್ಬರು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಸಂಚಾರಿ ಠಾಣೆಯ ಯಸ್. ಐ. ರಾಮನಾಯ್ಕ್ ಮತ್ತು ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಬಳಿಕ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Related Posts

Leave a Reply

Your email address will not be published.