ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ನಿಧನ
ಬೆಂಗಳೂರು:ರಾಷ್ಟ್ರಕವಿ ಕುವೆಂಪು ಅವರ ಸೊಸೆಯಾಗಿರುವ ರಾಜೇಶ್ವರಿ ಅವರು ವಯೋ ಸಹಜ ಅನಾರೋಗ್ಯದ ಹಿನ್ನೆಲೆ ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆ ರಾಜಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದ ಬಡಾವಣೆಯೊಂದರಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರಾಜೇಶ್ವರಿ ಅವರು ತನ್ನ ತಂದೆಯ ಪ್ರೋತ್ಸಾಹದಿಂದ ಆ ಕಾಲದಲ್ಲಿ ಉತ್ತಮ ವಿದ್ಯಭ್ಯಾಸ ಮಾಡಿದ್ದರು. ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂಎ ಪದವಿ ಮಾಡಲು ಮೈಸೂರಿನ ಮಾನಸ ಗಂಗೋತ್ರಿಗೆ ಬಂದಾಗ ಅಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪುತ್ರ ಸಾಹಿತಿ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಪರಿಚಯವಾಗಿ ಪರಸ್ಪರ ಪ್ರೀತಿಸಿದ್ದರು. ಬಳಿಕ 1966ರಲ್ಲಿ ಇವರ ವಿವಾಹ ಮಂತ್ರ ಮಾಂಗಲ್ಯ ಕಲ್ಪನೆಯಂತೆ ಮಾದರಿಯಾಗಿ ನಡೆದಿತ್ತು.ಇಲ್ಲಿಯವರೆಗೆ ಐದು ಮುದ್ರಣವನ್ನು ಕಂಡಿರುವ ‘ನನ್ನ ತೇಜಸ್ವಿ’ ರಾಜೇಶ್ವರಿ ಅವರ ಮೊದಲ ಕೃತಿಯಾಗಿದೆ. ಬಳಿಕ ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಎಂಬ ಎರಡನೇ ಪುಸ್ತಕವನ್ನು ಬರೆದಿದ್ದರು. ಅಪರೂಪದ ಹವ್ಯಾಸವನ್ನು ಹೊಂದಿರುವ ರಾಜೇಶ್ವರಿ ತೇಜಸ್ವಿ ಅವರು ಮಾದರಿ ವ್ಯಕ್ತಿತ್ವವನ್ನು ಹೊಂದಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರೂ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.