ಗದ್ದೆಗಿಳಿದು ಉಳುಮೆ ಮಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್..!
ಮೂಡುಬಿದಿರೆ : ವಿವಿಧ ಕೆಲಸ ಕಾರ್ಯಗಳ ಮೂಲಕ ಒಂದಲ್ಲ ಒಂದು ರೀತಿಯಲ್ಲಿ ಗಮನ ಸೆಳೆಯುತ್ತಿರುವ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತು ಯುವಕರು ಕೃಷಿಯತ್ತ ಒಲವು ತೋರಿಸಬೇಕೆಂಬ ಉದ್ದೇಶದಿಂದ ಮಂಗಳವಾರದಂದು ಮೂಡುಬಿದಿರೆಯ ಜೈನ್ ಪೇಟೆಯ ಬಳಿ ಇರುವ ಆಸಿಸ್ ಪಿಂಟೋ ಗದ್ದೆಯಲ್ಲಿ ಕೋಣ ಮತ್ತು ಟಿಲ್ಲರ್ನಲ್ಲಿ ಉಳುವೆ ಮಾಡುವ ಮೂಲಕ ಯುವಕರಿಗೆ ಮಾದರಿಯಾದರು.
ಬ್ಲಾಕ್ ಕಾಂಗ್ರೆಸ್ ಮತ್ತು ಕಿಸಾನ್ ಘಟಕದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಇದರ ನೇತೃತ್ವವನ್ನು ವಹಿಸಿದ್ದ ಜೈನ್ ಅವರು ಕೃಷಿ ಚಟುವಟಿಕೆಗಳಿಗೆ ಚಾಲನೆಯನ್ನು ನೀಡಿ ಮಾತನಾಡಿ ಯುವಕರು ವಿದ್ಯಾವಂತರಾಗುತ್ತಿದ್ದಂತೆ ಆಧುನಿಕ ಯುಗದಲ್ಲಿ ಕೃಷಿಯತ್ತ ಒಲವು ತೋರಿಸುವುದು ಕಡಿಮೆಯಾಗುತ್ತಾ ಬಂದಿದೆ. ಅಂದು ಇಂದಿರಾಗಾಂಧಿಯವರು ಉಳುವವನೆ ಹೊಲದೊಡೆಯ ಎಂಬ ಕಾನೂನಿನನ್ನು ತಂದಿದ್ದು ವೀರಪ್ಪ ಮೊಯಿಲಿ ಮತ್ತು ಜನಾರ್ದನ ಪೂಜಾರಿಯವರ ಹೋರಾಟದ ಫಲವಾಗಿ ದ.ಕ ಜಿಲ್ಲೆಯಲ್ಲಿ ಯುವಕರು ಸ್ವಾವಲಂಬಿಗಳಾದರು. ನಂತರ ಸಿದ್ಧರಾಮಯ್ಯ ಅವರು ಸರಕಾರ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಂಟಿ ಆಶ್ರಯದೊಂದಿಗೆ ಕೃಷಿ ಯಂತ್ರೋಪಕರಣಗಳನ್ನು ಅನುಷ್ಠಾನಗೊಳಿಸಿದರು. ಕಾಲಕ್ರಮೇಣ ಸರಕಾರದ ನೀತಿ ನಿಯಮದ ಬದಲಾವಣೆಗಳಿಂದ ಈ ಯೋಜನೆ ನಿಂತು ಹೋಗಿದ್ದು ಈ ಸಂದರ್ಭ ಕೃಷಿ ಮತ್ತು ಕೃಷಿಕರಿಗೆ ಶಕ್ತಿ ತುಂಬುವ ಕೆಲಸ ವೀರೇಂದ್ರ ಹೆಗ್ಗಡೆ ಅವರು ಶ್ರೀ ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೈಗೊಂಡು ಹಡಿಲು ಬಿದ್ದಿದ್ದ ಕೃಷಿ ಭೂಮಿಯನ್ನು ಯಂತ್ರೋಪಕರಣಗಳ ಮೂಲಕ ಉಳುಮೆ, ಕಟಾವು ಮಾಡುವ ಕೆಲಸಗಳನ್ನು ಮಾಡಿಸಿದರು ಇದರಿಂದಾಗಿ ಯುವಕರು ಮತ್ತೆ ಕೃಷಿಗೆ ಮರಳುವಂತ್ತಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಮಾತನಾಡಿ ಈ ಜಿಲ್ಲೆಯ ಮಣ್ಣಿನ ಕಂಪು, ರೈತನ ಪ್ರತಿಷ್ಠೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕಿಸಾನ್ ಘಟಕವು ಮಾರ್ಗದರ್ಶಕರ ನೇತೃತ್ವದಲ್ಲಿ ವಿಧಾನಸಭಾ ಕ್ಷೇತ್ರದ ಎಲ್ಲಾ ಹಡಿಲು ಬಿದ್ದಿರುವ ಕೃಷಿಭೂಮಿಯನ್ನು ಉಳುಮೆ ಮಾಡಿ ನೀಡಲಾಗುವುದು. ಸಾಧ್ಯವಾದಷ್ಟು ರೈತರ ಜತೆ ನಿರಂತರ ಸಂಪರ್ಕವನ್ನಿಟ್ಟುಕೊಳ್ಳುತ್ತೇವೆ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಕಿಸಾನ್ ಘಟಕದ ಮೂಡುಬಿದಿರೆ ತಾಲೂಕಿನ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪುರಸಭಾ ಸದಸ್ಯರಾದ ಕೊರಗಪ್ಪ, ಜೊಸ್ಸಿ ಮಿನೇಜಸ್, ಪುರಂದರ ದೇವಾಡಿಗ, ಇಕ್ಬಾಲ್ ಕರೀಂ,ಸುರೇಶ್ ಪ್ರಭು, ಗ್ರಾ.ಪಂ ಸದಸ್ಯ ಚಂದ್ರಹಾಸ ಸನಿಲ್, ಮೂಡುಬಿದಿರೆ ಮಹಿಳಾ ಕಾಂಗ್ರೆಸ್ನ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ, ಮೂಡುಬಿದಿರೆ ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ರಾಜೇಶ್ ಮಾರ್ನಾಡ್, ಶ್ರೀನಿವಾಸ ಗೌಡ, ಹರ್ಷ ವರ್ಧನ್ ಪಡಿವಾಳ್ ಮೊದಲಾದವರು ಉಪಸ್ಥಿತರಿದ್ದರು.