ದ.ಕ. ಜಿಲ್ಲಾಡಳಿತದಿಂದ 75ನೇ ಸ್ವಾತಂತ್ರ್ಯೋತ್ಸವ: ಸಚಿವ ಅಂಗಾರ ಅವರಿಂದ ತುಳುವಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದೇಶ
ದ.ಕ.ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ 75ನೇ ಸ್ವಾತಂತ್ರ್ಯೋತ್ಸವ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಧ್ವಜಾರೋಹಣ ನೆರವೇರಿಸಿದರು.
ಗೌರವ ವಂದನೆ ಸ್ವೀಕರಿಸಿದ ಬಳಿಕ ತುಳುವಿನಲ್ಲೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದೇಶ ನೀಡಿದ ಅವರು ನಮ್ಮ ದೇಶವಿಂದು ವಿಶ್ವದಲ್ಲೇ ಚಾರಿತ್ರಿಕ ಕಾಲಘಟ್ಟದಲ್ಲಿದೆ. ನಮಗೆ ಸಿಕ್ಕಿದ ಈ ಸ್ವಾತಂತ್ರ್ಯಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಅದೆಷ್ಟೋ ಕಷ್ಟನಷ್ಟಗಳನ್ನು ಹಿರಿಯರು ಅನುಭವಿಸಿದ್ದಾರೆ. ಅದೆಲ್ಲವೂ ಒಂದು ಇತಿಹಾಸ. ಅನೇಕ ಗಂಭೀರ ಸವಾಲಿನ ಮಧ್ಯೆಯೂ ರಾಷ್ಟ ಜೀವನದ ಭಿನ್ನತಾ ಮೌಲ್ಯಗಳ ಅಡಿಗಲ್ಲಿನಲ್ಲಿ ಎದುರಾಗುವ ಎಲ್ಲಾ ಸವಾಲುಗಳಿಗೆ ಉತ್ತರ ಕೊಡಬೇಕಾಗಿದೆ ಎಂದರು.ಕೊರೋನ ಮಹಾಮಾರಿಯ ೩ನೇ ಅಲೆ ಎದುರಿಸಲು ನಾವೆಲ್ಲರೂ ಸಿದ್ಧರಾಗೋಣ. ದುಡುಕು, ಉದಾಸಿನ ಬಿಟ್ಟು ಎಚ್ಚೆತ್ತುಕೊಂಡು ತಜ್ಞರು ತಿಳಿಸಿದಂತೆ ಸರಕಾರ ನಿಗದಿಪಡಿಸಿದ ನಿಯಮದಂತೆ ನಡೆದುಕೊಳ್ಳೋಣ. ಇಂತಹ ಕಷ್ಟಕಾಲದಲ್ಲಿ ನಮ್ಮ ಮುಂದಿನ ಪೀಳಿಗೆ ಮಕ್ಕಳಿಗೆ ಮನೆಗಳಲ್ಲಿ ಒಳ್ಳೆಯ ಶಿಕ್ಷಣ, ಸಂಸ್ಕಾರ ಸಿಗುವಂತೆ ಪ್ರಯತ್ನಿಸೋಣ ಎಂದು ಎಸ್.ಅಂಗಾರ ಕರೆ ನೀಡಿದರು.
ಈ ಸಂದರ್ಭ ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ. ಖಾದರ್, ಹರೀಶ್ ಕುಮಾರ್, ಮೇಯರ್ ಪ್ರೇಮಾನಂದ ಶೆಟ್ಟಿ, ಕರ್ನಾಟಕ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ, ದಿ. ಮೈಸೂರು ಇಲೆಕ್ಟಿಕಲ್ ಇಂಡಸ್ಟಿಸ್ ಲಿ.ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಐಜಿಪಿ ದೇವಜ್ಯೋತಿ ರೇ, ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಮತ್ತಿತರರು ಉಪಸ್ಥಿತರಿದ್ದರು.