ನನ್ನಿಂದ ತುಳುನಾಡಿಗೆ ಅಪಚಾರವಾಗಿದೆ ಎನ್ನುವ ಬಿಜೆಪಿ ಹೇಳಿಕೆಯನ್ನು ತಿರಸ್ಕರಿಸುತ್ತೇನೆ : ಮಂಜುನಾಥ ಪೂಜಾರಿ
ಕಾರ್ಕಳ: ಒಬ್ಬ ತುಳುವನಾಗಿ ತುಳುನಾಡಿನ ಸಂಸ್ಕøತಿ ಮತ್ತು ಸಂಸ್ಕಾರದ ಬಗ್ಗೆ ವಿಶೇಷ ಗೌರವವನ್ನು ಹೊಂದಿರುವ ನನ್ನಿಂದ ತುಳುನಾಡಿಗೆ ಅಪಚಾರವಾಗಿದೆ ಎನ್ನುವ ಬಿಜೆಪಿ ಹೇಳಿಕೆಯನ್ನು ತಿರಸ್ಕರಿಸುತ್ತಿರುವುದಾಗಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಹೇಳಿದ್ದಾರೆ.
ಅವರು ಕಾರ್ಕಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಉಡುಪಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಾರ್ಕಳಕ್ಕೆ ಬರಮಾಡಿಕೊಳ್ಳಲು ಆಹ್ವಾನಿಸುವ ಜತೆಗೆ, ತುಳುನಾಡಿನ ದೈವರಾಧನೆಯ ಪರಕರವಾದ ಕಡ್ಸಲೆ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದ್ದು ನಿಜ. ಆದರೆ ಈ ಹಿಂದೆ ತುಳುನಾಡಿನ ದೈವರಾಧನೆಗೆ ಅಪಪ್ರಚಾರ ಮಾಡುವಂತಹ ಯಾವ ದುರುದ್ದೇಶ ಕೂಡಾ ನನ್ನಲ್ಲಿಲ್ಲ. ದೈವ ದೇವರ ಮೇಲೆ ವಿಶೇಷ ಭಕ್ತಿ ಮತ್ತು ನಂಬಿಕೆಯುಳ್ಳ ನಮಗೆ ಬಿಜೆಪಿಯಿಂದ ಪಾಠ ಕಲಿಯಬೇಕಾಗಿಲ್ಲ. ತಮ್ಮದೇ ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಆಗಮಿಸುವ ಸಂದರ್ಭ ದೇವರ ಕಿರೀಟ, ಆಯುಧ, ದೇವರ ಮೂರ್ತಿಯನ್ನು ಉಡುಗೊರೆಯಾಗಿ ನೀಡುವ ಸಂದರ್ಭಗಳಲ್ಲಿ ಇಲ್ಲದ ಈ ಧರ್ಮ ಸೂಕ್ಷ್ಮತೆ, ಕಾಂಗ್ರೆಸ್‍ನವರು ಮಾಡಿದಾಗ ಹೇಗೆ ಎದ್ದೇಳುತ್ತದೆ ಎಂದು ಪ್ರಶ್ನಿಸಿದರು. ತುಳುವ ಬಗ್ಗೆ ಕಾಳಜಿ ವಹಿಸಿದಂತೆ ಮಾತನಾಡುವ ಈ ಶಾಸಕರು, ತುಳುನಾಡಿನ ಮಣ್ಣಿನವರು ಅಲ್ಲ. ಅವರು ಬೇರೆ ಜಿಲ್ಲೆಯಿಂದ ನಮ್ಮೂರಿಗಾಗಮಿಸಿದವರಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ನಕ್ರೆ ಬಿಪಿನ್‍ಚಂದ್ರಪಾಲ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ರಾಜ್ಯ ಯುವ ಕಾಂಗ್ರೆಸ್ ಮುಖಂಡ ರವಿಶಂಕರ್ ಶೇರಿಗಾರ್, ಪುರಸಭೆ ಸದಸ್ಯ ಶುಭದ ರಾವ್, ತಾಲೂಕು ರೈತ ಸಂಘದ ಅಧ್ಯಕ್ಷ ಪ್ರಕಾಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.