ಪುತ್ತೂರಿನಲ್ಲಿ ‘ಭತ್ತ ಬೆಳೆಯೋಣ ಬದುಕು ಕಟ್ಟೋಣ’ ಆಂದೋಲನ
ದಕ್ಷಿಣ ಕನ್ನಡ ಜಿಲ್ಲೆ ಹಿಂದೆ ಪೂರ್ಣ ಪ್ರಮಾಣದಲ್ಲಿ ಭತ್ತದ ಬೇಸಾಯದ ಜಿಲ್ಲೆಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಬೇಸಾಯವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆಶಯದಂತೆ ಮತ್ತೆ ದ.ಕ. ಜಿಲ್ಲೆಯನ್ನು ಬೇಸಾಯ ವೈಭವದ ಜಿಲ್ಲೆ ಮಾಡುವ ಉದ್ದೇಶ ಇಟ್ಟುಕೊಂಡು ಭತ್ತ ಬೆಳೆಯೋಣ.. ಬದುಕು ಕಟ್ಟೋಣ ಎಂಬ ಆಂದೋಲನ ಆರಂಭಿಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಾಲಯಗಳಿಗೆ ಸೇರಿದ ಹಡಿಲು ಗದ್ದೆಗಳನ್ನು ಮೊದಲ ಹಂತದಲ್ಲಿ ಸಮೀಕ್ಷೆ ಮಾಡಿ ಆಯಾ ದೇವಗಳ ವತಿಯಿಂದಲೇ ಬೇಸಾಯ ಮಾಡಲು ಪ್ರೇರಣೆ ನೀಡಲಾಗುತ್ತಿದೆ. ಇತರ ದೇಗುಲಗಳು, ಮಠ ಮಂದಿರಗಳು ಈ ನಿಟ್ಟಿನಲ್ಲಿ ಮುಂದೆ ಬರಬೇಕು. ಅದೇ ರೀತಿ ಖಾಸಗಿ ಹಡಿಲು ಗದ್ದೆಗಳನ್ನು ಬೇಸಾಯ ಮಾಡಲು ಕೊಟ್ಟರೆ ಅದನ್ನು ಸಂಘ ಸಂಸ್ಥೆಗಳ ವತಿಯಿಂದ ಬೇಸಾಯ ಮಾಡಲು ಪ್ರೇರಣೆ ನೀಡಲಾಗುವುದು. ಪುತ್ತೂರು ಮಹಾಲಿಂಗೇಶ್ವರ ದೇವಳದ ವಿಶಾಲ ಗದ್ದೆಯಲ್ಲಿ ದೇಗುಲದ ವತಿಯಿಂದಲೇ ಬೇಸಾಯ ಮಾಡಲಾಗುತ್ತದೆ ಎಂದರು.
ನಮ್ಮ ಪರಂಪರೆ, ಸಂಸ್ಕಾರ ಉಳಿಸಲು ಇದು ಸಕಾಲ. ಕೃಷಿ ಉಳಿಸುವ ಮೂಲಕ ಅಂತರ್ಜಲ ಸಂರಕ್ಷಣೆ, ಬದುಕಿನ ಮೂಲ ಸತ್ವದ ಮರು ಸಂರಕ್ಷಣೆ ನಡೆಯಬೇಕು. ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ತನ್ನ ಹಿಂದಿನ ಬೇಸಾಯ ವೈಭವಕ್ಕೆ ಮರಳಬೇಕು. ನಮ್ಮ ಜಿಲ್ಲೆಗೆ ಬೇಕಾದ ಕುಚ್ಚಿಲಕ್ಕಿ ಇಲ್ಲಿಯೇ ಬೆಳೆಯುವಂತಾಗಬೇಕು ಎಂಬುದು ಇಲ್ಲಿನ ಆಶಯ ಎಂದರು. ನಾನಾ ಕಡೆ ಇರುವ ಹಡಿಲು ಗದ್ದೆಗಳ ಗುರುತಿಸುವಿಕೆ ಕಾರ್ಯ ನಡೆಯುತ್ತಿದೆ. ಅಲ್ಲಲ್ಲೇ ಸಭೆ ನಡೆಸಿ ಬೇಸಾಯ ಮಾಡುವ ಪ್ರಕ್ರಿಯೆ ಚಾಲನೆ ನೀಡಲಾಗುತ್ತದೆ. ಈ ಅಭಿಯಾನದಲ್ಲಿ ದೇವಸ್ಥಾನಗಳು ಮಾತ್ರವಲ್ಲದೆ, ಜಾತಿ, ಧರ್ಮಗಳ ಭೇದವಿಲ್ಲದೆ ಎಲ್ಲರೂ ಸೇರಿಕೊಳ್ಳಬೇಕು ಎಂದವರು ಮನವಿ ಮಾಡಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿ: ಅನೀಶ್ ಪುತ್ತೂರು