ಪ್ರಿಯಕರನಿಂದಲೇ ತಂದೆಯನ್ನುಕೊಲ್ಲಿಸಿದ ಪುತ್ರಿ

ಬೆಂಗಳೂರು: ತನ್ನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದ ತಂದೆಯನ್ನು ಮಗಳು ತನ್ನ ಪ್ರಿಯಕರನಿಂದಲೇ ಮನೆಗೆ ಕರೆಸಿ ಕೊಲ್ಲಿಸಿದ ಪ್ರಕರಣವೊಂದು ನಡೆದಿದೆ.
ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿರುವ ಪುತ್ರಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತರ ಮೂಲಕ ಕೊಲೆ ಮಾಡಿಸಿದ್ದಾಳೆ.ಯಲಹಂಕ ನ್ಯೂ ಟೌನ್ನ ಅಟ್ಟೂರು ಬಡಾವಣೆ ನಿವಾಸಿ ದೀಪಕ್ ಕುಮಾರ್ ಸಿಂಗ್ (46) ಕೊಲೆಯಾದ ವ್ಯಕ್ತಿ.
ಬಿಹಾರ ಮೂಲದ ಇವರು ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಗಳು ಪ್ರೀತಿಸುತ್ತಿದ್ದ ವಿಚಾರ ದೀಪಕ್ ಕುಮಾರ್ ಗಮನಕ್ಕೆ ಬಂದು ಆಕೆಯನ್ನು ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿದ್ದರು. ತಂದೆ ಹೀಗೆ ಮಾಡಿದ್ದನ್ನು ಮಗಳು ತನ್ನ ಪ್ರಿಯಕರನಿಗೆ ತಿಳಿಸಿದ್ದಳು.
ಭಾನುವಾರ ಬೆಳಗ್ಗೆ ಅಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಕಲಬುರಗಿಗೆ ತೆರಳಿದ್ದರು. ಮನೆಯಲ್ಲಿ ತಂದೆ ಮಾತ್ರ ಇರುವ ಬಗ್ಗೆ ಮಗಳು ಪ್ರಿಯಕರನಿಗೆ ಮಾಹಿತಿ ನೀಡಿದ್ದಳು.
ಹತ್ಯೆ ಮಾಡಲು ಇದೇ ಸರಿಯಾದ ಸಮಯ ಎಂದುಕೊಂಡ ಪ್ರಿಯಕರ ತನ್ನ ಮೂವರು ಅಪ್ರಾಪ್ತ ವಯಸ್ಸಿನ ಸ್ನೇಹಿತರ ಜತೆಗೆ ಭಾನುವಾರ ರಾತ್ರಿ 12.30ಕ್ಕೆ ದೀಪಕ್ ಮನೆಗೆ ಬಂದು ಬಾಗಿಲು ತಟ್ಟಿದ್ದ.
ದೀಪಕ್ ಬಾಗಿಲು ತೆಗೆಯುತ್ತಿದ್ದಂತೆ ನಾಲ್ವರು ಬಾಲಕರು ಜತೆಯಾಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಚೀರಾಟ ಕೇಳಿ ನೆರೆ-ಹೊರೆಯವರು ದೀಪಕ್ ಮನೆಗೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದ್ದು,
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯಲಹಂಕ ನ್ಯೂ ಟೌನ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.