ಬಂಟ್ವಾಳದಲ್ಲಿ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ
ಬಂಟ್ವಾಳ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಮೇರಮಜಲು ಗ್ರಾಮ ಪಂಚಾಯತಿ ಆಶ್ರಯದಲ್ಲಿ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸುವ ಕಾರ್ಯಕ್ರಮ ಶುಕ್ರವಾರ ಮೇರಮಜಲಿನ ಶ್ರಿ ರಾಜೇಶ್ವರೀ ಸಭಾಂಗಣದಲ್ಲಿ ನಡೆಯಿತು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಕಾರ್ಮಿಕರಿಗೆ ಕಿಟ್ ವಿತರಿಸಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರ ಕೋವಿಡ್ ಸಂಕಷ್ಟ ಕಾಲದಲ್ಲಿ ಬಡ ಕಾರ್ಮಿಕರಿಗೆ ಆಹಾರದ ಕಿಟ್ ನೀಡುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ದೇಶಾದಗ್ಯಂತ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ, ಆರಂಭದಲ್ಲಿ ಲಸಿಕೆ ಬೇಡ ಎಂದವರೂ ಗುಟ್ಟಾಗಿ ಲಸಿಕೆ ಪಡೆದುಕೊಂಡಿದ್ದಾರೆ, ಈಗಾಗಲೇ ದೇಶಾದ್ಯಂತ ೩೫ ಕೋಟಿ ಜನರು, ಲಸಿಕೆ ಹಾಕಿಸಿದ್ದಾರೆ, ಮುಂದಿನ ನವೆಂಬರ್ ವೇಳೆಗೆ ಎಲ್ಲರಿಗೂ ಲಸಿಕೆ ಸಿಗಲಿದೆ ಎಂದು ತಿಳಿಸಿದರು. ದೃಢತೆ ಹಾಗೂ ವಿಶ್ವಾಸ ಇದ್ದಾಗ ಏನು ಮಾಡಲೂ ಸಾಧ್ಯವಿದೆ, ಪಂಚಾಯತಿ ಅಧ್ಯಕ್ಷೆ ಜಯಶ್ರೀ ಕರ್ಕೆರಾ ಅವರ ಪ್ರಯತ್ನದ ಫಲವಾಗಿ ಇಂದು ಇಷ್ಡು ದೊಡ್ಡ ಸಂಖ್ಯೆಯಲ್ಲಿ ಆಹಾರದ ಕಿಟ್ ನೀಡಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ಎಲೆಕ್ಟ್ರಿಕಲ್ಸ್ ಮತ್ತು ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳ್ಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ದೇಶಾದ್ಯಂತ ಅನೇಕ ಪಕ್ಷ ಸಣ್ಣ ರೈತರು 2 ಸಾವಿರದಂತೆ ಆರ್ಥಿಕ ಸಹಾಯ ಪಡೆಯುತ್ತಿದ್ದಾರೆ. ಕೇವಲ 12 ರೂಪಾಯಿ ಪಾವತಿಸಿದರೆ ವಿಮೆ ಪಡೆಯುವ ಅವಕಾಶವನ್ನು ಕೇಂದ್ರ ಸರಕಾರ ನೀಡಿದೆ. ಇಂತಹ ಹಲವಾರು ಯೋಜನೆಗಳನ್ನು ಸರಕಾರ ಜಾರಿಗೆ ತರುವ ಮೂಲಕ ಜನರ ಸೇವೆ ಮಾಡುತ್ತಿದೆ ಎಂದರು.
ಪಂಚಾಯತಿ ಅಧ್ಯಕ್ಷೆ ಜಯಶ್ರೀ ಕರ್ಕೆರ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಫಲವಾಗಿ ದೇಶ ಇಂದು ಕರೋನಾ ನಿಯಂತ್ರಣದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಸರಕಾರದ ವಿವಿಧ ಯೋಜನೆಗಳನ್ನು ಗ್ರಾಮದ ಜನರಿಗೆ ತಲುಪಿಸುವ ಕಾರ್ಯವನ್ನು ಪಂಚಾಯತಿ ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ ಕಂಬಳಿ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಗಣೇಶ್ ಸುವರ್ಣ ತುಂಬೆ , ಪಂಚಾಯಿತಿ ಉಪಾಧ್ಯಕ್ಷ ಕೊಟ್ಟಿಂಜ ಪದ್ಮನಾಭ ಶೆಟ್ಟಿ ಎಪಿಎಂಸಿ ಉಪಾಧ್ಯಕ್ಷ ವಿಠಲ ಸಾಲ್ಯಾನ್, ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತ ನಾಗರಾಜ, ಕಾರ್ಮಿಕ ಅಧಿಕಾರಿ ವಿಲ್ಮಾ, ಪಂಚಾಯತಿ ಪಿಡಿಒ ರಶ್ಮಿ ಆರ್, ಸದಸ್ಯ ಮನೋಜ್ ಆಚಾರ್ಯ ನಾಣ್ಯ ಮೊದಲಾದವರು ಉಪಸ್ಥಿತರಿದ್ದರು. ದಿನೇಶ್ ಶೆಟ್ಟಿ ಕೊಟ್ಟಿಂಜ ಕಾರ್ಯಕ್ರಮ ನಿರೂಪಿಸಿದರು.