ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಚಂದ್ರಶೇಖರ್
ಬಂಟ್ವಾಳ: ದೇಶದಲ್ಲಿ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗಿದ್ದು ಇದನ್ನು ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ವಿಫಲವಾಗಿದೆ ಎಂದು ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಚಂದ್ರಶೇಖರ ಪೂಜಾರಿ ಆರೋಪಿಸಿದರು.
ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪೆಟ್ರೋಲ್ ಡೀಸೆಲ್ ಕಚ್ಛಾ ಸಾಮಾಗ್ರಿಗಳ ದರ ವಿದೇಶದಲ್ಲಿ ಸಂಪೂರ್ಣ ಇಳಿಕೆಯಾಗಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರ ಹೆಚ್ಚುವರಿ ತೆರಿಗೆಯನ್ನು ವಿಧಿಸಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲು ಕಾರಣವಾಗಿದೆ ಎಂದರು. ಬಿಜೆಪಿ ದೇವಸ್ಥಾನಗಳನ್ನು ಕೆಡವುತ್ತಾ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುತ್ತಿದೆ. ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪ್ರತಾಪ ಸಿಂಹ ಸುಳ್ಳು ಹೇಳಿಕೆಗಳನ್ನು ನೀಡಿ ಹಿಂದೂ ಸಮುದಾಯಕ್ಕೆ ವಂಚಿಸುತ್ತಿದ್ದಾರೆ ಎಂದು ದೂರಿದರು. ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ರಾಜ್ಯ ಸಂಯೋಜಕ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಬೂಡ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪ್ರಮುಖರಾದ ಜಗನ್ನಾಥ ಕೆ. ಬಂಟ್ವಾಳ, ಲೋಕೇಶ್ ಪೂಜಾರಿ, ವೆಂಕಪ್ಪ ಪೂಜಾರಿ ಉಪಸ್ಥಿತರಿದ್ದರು.