ಮಂಗಳೂರು ನಗರದ ಕೊಲೊಸೊ ಕಾಲೇಜಿನ ವಿದ್ಯಾರ್ಥಿನಿ ನೀನಾಳ ಸಾವಿನ ತನಿಖೆಗೆ ಎಸ್.ಎಫ್.ಐ. ಒತ್ತಾಯ

ಮಂಗಳೂರು ನಗರದ ಕೊಲೊಸೊ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಜನೆ ಮಾಡುತ್ತಿದ್ದ ಕಾಸರಗೋಡು ಮೂಲದ ವಿದ್ಯಾರ್ಥಿನಿ ನೀನಾ ಹಾಸ್ಟೇಲ್‌ನ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯ ಬಗ್ಗೆ ಕಾಲೇಜಿನ ವಿದ್ಯಾರ್ಥಿ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿದೆ. ವಿದ್ಯಾರ್ಥಿನಿಯು ಆತ್ಮಹತ್ಯೆಗೈಯಲು ಹಾಸ್ಟೆಲ್‌ನಲ್ಲಿ ನೀಡುವ ಮಾನಸಿಕ ಕಿರುಕುಳವೇ ಕಾರಣ ಎಂದು ಮೇಲ್ನೋಟಕ್ಕೆ ಕಾಣುತ್ತಿದ್ದು ಪೊಲೀಸ್ ಇಲಾಖೆ ವಿದ್ಯಾರ್ಥಿ ನೀನಾಳ ಸಾವಿನ ನೈಜ ಕಾರಣವನ್ನು ಪತ್ತೆಹಚ್ಚಿ ಬಯಲಿಗೆಳೆಯಲು ಸಮಗ್ರ ತನಿಖೆ ನಡೆಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ( SFI) ದ.ಕ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಕಾಲೇಜಿಗೆ ಕೇರಳದಿಂದ ವಿದ್ಯಾರ್ಥಿಗಳನ್ನು ಪೊರೈಸುತ್ತಿರುವ ಏಜೆಂಟ್ ವಿದ್ಯಾರ್ಥಿನಿಯರಿಗೆ ನಿರ್ಬಂಧಗಳ ನೆಪ ಮತ್ತು ಶುಲ್ಕದ ನೆಪದಲ್ಲಿ ಕಿರುಕುಳ ಕೊಡುತ್ತಿದ್ದು ವಿದ್ಯಾರ್ಥಿಗಳು ಅವರು ಎದುರಿಸುತ್ತಿರುವ ಮಾನಸಿಕ ಒತ್ತಡವನ್ನು ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಮುಖಂಡರ ಬಳಿ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ವಾರ್ಡನ್ ಹೊರತಾಗಿ ಓರ್ವ ಪುರುಷ ಏಜೆಂಟ್ ಬಂದು ತನ್ನದೇ ಆದ ನಿಯಮಗಳನ್ನು ಹೇರುವುದಲ್ಲದೆ ರಾತ್ರಿ ಹೊತ್ತು ಶುಲ್ಕದ ನೆಪವೊಡ್ಡಿ ವಿದ್ಯಾರ್ಥಿನಿಯರ ಕೊಠಡಿಗೆ ತೆರಳುವ ವಿಷಯ ತಿಳಿದುಬಂದಿದೆ. ವಿದ್ಯಾರ್ಥಿನಿಗೆ ಡೈರಿ ಬರೆಯುವ ಹವ್ಯಾಸವಿದ್ದು ವಿದ್ಯಾರ್ಥಿನಿಯ ಸಾವಿನ ಬಳಿಕ ಪೊಲೀಸರ ಬದಲು ಪ್ರಾಂಶುಪಾಲರು ವಿದ್ಯಾರ್ಥಿನಿಯ ಡೈರಿ ತೆಗೆದುಕೊಂಡು ಹೋಗಿದ್ದು ಇದು ಅನುಮಾನಕ್ಕೀಡಾಗಿದೆ.

ಹಾಸ್ಟೆಲ್‌ನ ನಿಯಮ ಪಟ್ಟಿಯಲ್ಲಿ “ನಮಗೆ ಬೇಕಾದ ಹಾಗೆ ನಿಯಮ ಬದಲಾಯಿಸುತ್ತೇವೆ” ಎಂಬರ್ಥದಲ್ಲಿ ನಿಯಮ ರಚಿಸಿ ವಿದ್ಯಾರ್ಥಿನಿಯರಲ್ಲಿ ಸಹಿ ಮಾಡಲು ಒತ್ತಡ ಹೇರಿದ್ದು, ಸಹಿ ಮಾಡದೆ ಇದ್ದರೆ ಆಡಳಿತ ಮಂಡಳಿಯ ಕ್ಯಾಬಿನ್ ಗೆ ಒಬ್ಬರೇ ಹೋಗಿ ಮಾತನಾಡಬೇಕು ಎಂದು ತಿಳಿಸಿರುತ್ತಾರೆ.

ವಿದ್ಯಾರ್ಥಿನಿಯರಿಗೆ ಅನಾರೋಗ್ಯದ ಸಮಯದಲ್ಲಿ ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಇಲ್ಲ ಹಾಗೂ ಪಿರೇಡ್ಸ್ ಸಮಯದಲ್ಲಿ ನ್ಯಾಪ್ಕೀನ್ ಖರೀದಿಸಲೂ ಸಹ ಹೊರಗೆ ಬಿಡುತ್ತಿಲ್ಲ ಮತ್ತು ಅವರುಗಳು ಕೂಡ ವ್ಯವಸ್ಥೆ ಮಾಡುತ್ತಿಲ್ಲ. ಪ್ರತಿಯೊಂದು ಹಾಸ್ಟೆಲ್‌ನಲ್ಲೂ ಅವಶ್ಯಕ ಮಾತ್ರೆಗಳು ಮತ್ತು ಹೆಣ್ಣುಮಕ್ಕಳಿಗೆ ನ್ಯಾಪ್ಕೀನ್ ಇರಬೇಕು ಎಂಬ ನಿಯಮ ಇದ್ದರೂ ಅದನ್ನು ಪಾಲಿಸುತ್ತಿಲ್ಲ.

ಈ ಎಲ್ಲಾ ಸಮಸ್ಯೆಗಳ ನಡುವೆ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ಲ್ ವಾರ್ಡಾನ್ ಸಮಸ್ಯೆಯೂ ಎದುರಾಗಿದೆ. ಈಗಾಗಲೇ 3 ವಾರ್ಡನ್ ಬದಲಾಗಿದ್ದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ವಾರ್ಡನ್‌ ಹಾಸ್ಟೆಲ್‌ನಲ್ಲಿ ಇರುತ್ತಾರೆ. ವಿದ್ಯಾರ್ಥಿನಿಯರಿಗೆ ಭದ್ರತೆಗೆ ಸೆಕ್ಯುರಿಟಿ ವ್ಯವಸ್ಥೆ ಕೂಡ ಇಲ್ಲ. ವಿದ್ಯಾರ್ಥಿನಿಯರ ಹೆತ್ತವರು ಆರ್ಥಿಕ ಸಮಸ್ಯೆಯಿಂದಾಗಿ ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಅಥವಾ ಸರಕಾರಿ ಹಾಸ್ಟೆಲ್‌ನಲ್ಲಿ ಇರಿಸುತ್ತೇವೆ ಅಂದರೆ ಟಿ.ಸಿ. ಕೊಡುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ.

ಇನ್ನೂ ಅನೇಕ ಸಮಸ್ಯೆಗಳನ್ನು ಮತ್ತು ಮಾನಸಿಕ ಒತ್ತಡವನ್ನು ವಿದ್ಯಾರ್ಥಿನಿಯರು ಅನುಭವಿಸುತ್ತಿದ್ದು ವಿದ್ಯಾರ್ಥಿನಿ ನೀನಾಳ ಸಾವಿಗೆ ಇದುವೇ ಮುಖ್ಯ ಕಾರಣವಾಗಿದ್ದು ಪೊಲೀಸ್ ಇಲಾಖೆ  ಕೂಲಂಕುಷ ತನಿಖೆ ಮಾಡಬೇಕು. ಆತ್ಮಹತ್ಯೆ ಮಾಡಲು ಹಿಂದಿರುವ ಕಾರಣವನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನುಕ್ರಮಕ್ಕೆ ಒಳಪಡಿಸಬೇಕೆಂದು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (SFI) ದ.ಕ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಮಾಧುರಿ ಬೋಳಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related Posts

Leave a Reply

Your email address will not be published.