ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ: 2021 ನೇ ಸಾಲಿನ ನೊಂದಾವಣಿ ಪ್ರಕ್ರಿಯೆ ಪ್ರಾರಂಭ
ಮಂಗಳೂರು: ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯ 2021ನೇ ಸಾಲಿನ ದಾಖಲಾತಿಯು ಪ್ರಾರಂಭವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅತ್ತಾವರ ಕೆ.ಎಂ.ಸಿ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಜಾನ್ ರಾಮಪುರಮ್ ತಿಳಿಸಿದರು.
ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮಣಿಪಾಲ್ ಆರೋಗ್ಯ ಕಾರ್ಡ್ ಯೋಜನೆಯು ಸಮುದಾಯಕ್ಕೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಯಶಸ್ವಿಯಾಗಿ 20 ವರ್ಷಗಳನ್ನು ಪೂರೈಸಿದೆ. ಸಂಸ್ಥೆಯ ಸಂಸ್ಥಾಪಕ, ದಿವಂಗತ ಡಾ. ಟಿ.ಎಂ.ಎ. ಪೈ ಯವರ ಕನಸಿನಂತೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರಿಗೂ ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಈ ಯೋಜನೆಯನ್ನು 2000ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು. ಕಳೆದ 20 ವರ್ಷಗಳಲ್ಲಿ ಸಾಮಾಜಿಕ ಕಾಳಜಿಯೊಂದಿಗೆ ಉತ್ಕೃಷ್ಟ ಗುಣಮಟ್ಟದ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನೀಡುವುದರ ಮೂಲಕ ಈ ಯೋಜನೆಗೆ ಹೆಚ್ಚು ಹೆಚ್ಚು ಸದಸ್ಯರನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇತ್ತೀಚಿನ ಸಾಕ್ರಾಮಿಕ ಪಿಡುಗಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಣಿಪಾಲ್ ಆರೋಗ್ಯ ಕಾರ್ಡ್ ದಾಖಲಾತಿ ಪ್ರಕ್ರಿಯೆಯನ್ನು ಡಿಜಿಟಲ್ ಮಾಧ್ಯಮವನ್ನು ಅನುಸರಿಸಿ ಆಪ್ ಮೂಲಕ ನೋಂದಾವಣಿಯನ್ನು ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಮನೆಯಲ್ಲಿಯೇ ಕುಳಿತು ಶುಲ್ಕವನ್ನು ಆನ್ ಲೈನ್ ಪಾವತಿಸಿ ಸಂಪರ್ಕ ರಹಿತ ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಾವಣೆಯನ್ನು ಮಾಡಬಹುದು ಹಾಗೂ ಕಾರ್ಡನ್ನು ಗ್ರಾಹಕರ ಮನೆಗೆ ತಲುಪಿಸಲಾಗುವುದು. ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇರುವ ನಮ್ಮ 500ಕ್ಕೂ ಹೆಚ್ಚಿನ ಅಧಿಕೃತ ಪ್ರತಿನಿಧಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಕೆ.ಎಂ.ಸಿ. ಆಸ್ಪತ್ರೆ ಮಂಗಳೂರಿನ ರೀಜನಲ್ ಚೀಫ್ ಆಪರೇಟಿಂಗ್ ಆಫೀಸರ್ ಸಘೀರ್ ಸಿದ್ದಿಕಿಯವರು ಸೌಲಭ್ಯಗಳ ಬಗ್ಗೆ ಮಾತನಾಡುತ್ತಾ, “ಒಂದು ಸಣ್ಣ ಮೊತ್ತವನ್ನು ಸದಸ್ಯತ್ವ ಶುಲ್ಕವಾಗಿ ಪಾವತಿಸುವ ಮೂಲಕ ಯಾರೊ ಕೂಡ ಸದಸ್ಯತ್ವವನ್ನು ಪಡೆಯಬಹುದು. ಈ ಯೋಜನೆಯು ಒಂದು ವರ್ಷ ಮತ್ತು ಎರಡು ವರ್ಷದ ಅವಧಿಯನ್ನು ಹೊಂದಿದ್ದು, ಈ ಆರೋಗ್ಯ ಕಾರ್ಡ್ ಹೊಂದಿರುವವರು ಮಣಿಪಾಲ್ ಸಮೂಹ ಆಸ್ಪತ್ರೆಗಳಾದ ಕೆ.ಎಂ., ಆಸ್ಪತ್ರೆ ಅತ್ತಾವರ, ಕೆ.ಎಂ.ಸಿ ಆಸ್ಪತ್ರೆ ಜ್ಯೋತಿ ವೃತ್ತ, ದುರ್ಗಾ ಸಂಜೀವನಿ ಮಣಪಾಲ್ ಆಸ್ಪತ್ರೆ ಕಟೀಲು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿ, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ, ಕಾರ್ಕಳ, ಹಾಗೂ, ಮಣಿಪಾಲ್ ಆಸ್ಪತ್ರೆ ಗೋವಾಗಳಲ್ಲಿ ರಿಯಾಯಿತಿ ಸೌಲಭ್ಯಗಳನ್ನು ಪಡೆಯಬಹುದು. ಈ ಕಾರ್ಡ್ನ ಸೌಲಭ್ಯಗಳು ದಂತ ಚಿಕಿತ್ಸೆಗೂ ಅನ್ವಯವಾಗಲಿದ್ದು ಕಾರ್ಡುದಾರರು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸಯನ್ಸ್ ಮಂಗಳೂರು ಮತ್ತು ಮಣಿಪಾಲದಲ್ಲಿ ರಿಯಾಯಿತಿ ಸೌಲಭ್ಯಗಳನ್ನು ಪಡೆಯಬಹುದು. ಇದಲ್ಲದೇ ಜಿಲ್ಲೆಯ ಬೆಂದೂರ್ವೆಲ್, ಬಲ್ಲಠ, ಮನಗುಡ್ಡ, ಬಿಜೈ, ಸುರತ್ಕಲ್, ಮುಲ್ಕಿ, ಬಿಕರ್ನಕಟ್ಟೆ, ಬಂಟ್ವಾಳ ಮತ್ತು ವಿಟ್ಲದಲ್ಲಿ ಕಾರ್ಯಾಚರಿಸುತ್ತಿರುವ ಕೆ.ಎಂ.ಸಿ. ಆಸ್ಪತ್ರೆಯ ಲ್ಯಾಬ್ ಕಲೆಕ್ಷನ್ ಸೆಂಟರ್ ಗಳಲ್ಲಿಯೂ ಕೂಡ ರಿಯಾಯಿತಿ ಸೌಲಭ್ಯವನ್ನು ಪಡೆಯಬಹುದು ಎಂದರು.
ಕೆ.ಎಂ.ಸಿ. ಆಸ್ಪತ್ರೆ ಮಂಗಳೂರಿನ ಮಾರುಕಟ್ಟೆ ವಿಭಾಗದ ಆಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸುರೇಂದ್ರ ಪ್ರಸಾದ್ ಕಾರ್ಡಿನ ಸದಸ್ಯತ್ವ ಶುಲ್ಕದ ಬಗ್ಗೆ ಮಾತನಾಡುತ್ತಾ, “ಕಾರ್ಡಿನ ಸದಸ್ಯತ್ವವು ಒಂದು ವರ್ಷಕ್ಕೆ ಒಬ್ಬರಿಗೆ ರೂ. 3೦೦/, ಕುಟುಂಬಕ್ಕೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25ವರ್ಷದ ಒಳಗಿನ ಮಕ್ಕಳಿಗೆ ರೂ, 6೦೦/- ಮತ್ತು ಕುಟುಂಬ ಪ್ಲಸ್ ಯೋಜನೆಗೆ ಅಂದರೆ ಕಾರ್ಡುದಾರ, ಅವರ ಸಂಗಾತಿ, 25ವರ್ಷದ ಒಳಗಿನ ಮಕ್ಕಳು ಮತ್ತು 4 ಪೋಷಕರಿಗೆ (ತಂದೆ, ತಾಯಿ, ಅತ್ತೆ ಮತ್ತು ಮಾವ) ರೂ. 750/- ಇರುತ್ತದೆ. ಆಯ್ಕೆದಾರರಿಗೆ ಹೆಚ್ಚುವರಿ ಲಾಭವಾಗಲಿದೆ. 2 ವರ್ಷದ ಯೋಜನೆಯಲ್ಲಿ ಒಬ್ಬರಿಗೆ ರೂ. 5೦೦/- ಮತ್ತು ಕುಟುಂಬಕ್ಕೆ 8೦೦/-, ಕುಟುಂಬ ಪ್ಲಸ್ ಯೋಜನೆಗೆ ರೂ. 950/- ನಿಗದಿಪಡಿಸಲಾಗಿದೆ’ ಎಂದು ಹೇಳಿದರು.
ಕೆಎಂಸಿ ಆಸ್ಪತ್ರೆಯ ಮಂಗಳೂರಿನ ಮಾರುಕಟ್ಟೆ ವಿಭಾಗದ ಡೆಪ್ಯೂಟಿ ಮ್ಯಾನೇಜರ್ ರಾಕೇಶ್ ಅವರು ಮಾತನಾಡಿ, ಸೌಲಭ್ಯಗಳ ಬಗ್ಗೆ ಮಾತನಾಡಿ, ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರು ಎಲ್ಲಾ ತಜ್ಞ ಅಥವಾ ಸೂಪರ್ ಸ್ಪೆಷಲಿಸ್ಟ್ ವೈದ್ಯರ ಹೊರರೋಗಿ ಸಮಾಲೋಚನೆ ಮೇಲೆ 25% ದಿಂದ 50% ರಿಯಾಯಿತಿ ಇದೆ. ಪ್ರಯೋಗಾಲಯ ಪರೀಕ್ಷೆಗಳ ಮೇಲೆ ಶೇ.20ರಷ್ಟು ರಿಯಾಯಿತಿ ರೇಡಿಯಾಲಜಿ ಪರೀಕ್ಷೆಗಳಾದ ಸಿಟಿ ಎಮ್. ಆರ್. ಐ ಅಲ್ಟ್ರಾ ಸೌಂಡ್ ಎಕ್ಸರೇ ಹಾಗೂ ಇನ್ನಿತರ ಪರೀಕ್ಷೆಗಳ ಮೇಲೆ ಶೇ.20ರಷ್ಟು ರಿಯಾಯಿತಿ ಇದೆ. ಆಸ್ಪತ್ರೆಯ ಔಷಧಾಲಯದಿಂದ ಖರೀದಿಸಿದ ಔಷಧಿಗಳ ಮೇಲೆ ಶೇ.10ರ ವರೆಗೆ ರಿಯಾಯಿತಿ ಇರುತ್ತದೆ. ಒಳರೋಗಿಯಾಗಿ ದಾಖಲಾದಲ್ಲಿ ಬಿಲ್ಲಿನಲ್ಲಿ 25% ವರೆಗೆ ರಿಯಾಯಿತಿ ಸಿಗುತ್ತದೆ ಎಂದು ಹೇಳಿದರು.
ಆಸಕ್ತರು ತಮ್ಮ ಸಮೀಪದಲ್ಲಿರುವ ಅಧಿಕೃತ ಪ್ರತಿನಿಧಿಗಳ ಬಗ್ಗೆ ತಿಳಿದುಕೊಳ್ಳಲು ಅಥವಾ ಅನ್ಲೈನ್ ದಾಖಲಾತಿಗಾಗಿ ನಮ್ಮ ಅಧಿಕೃತ ಮಣಿಪಾಲ್ ಆರೋಗ್ಯ ಕಾರ್ಡ್ ವಿಭಾಗದ ದೂರವಾಣಿ ಸಂಖ್ಯೆ 7022078002 ನ್ನು ಸಂಪರ್ಕಿಸಬಹುದು.