ಮೂಡುಬಿದಿರೆ ಕಂಬಳ “ಶಿಸ್ತು ಪಾಲನಾ ಸಮಿತಿ” ಸಭೆ

ಮೂಡುಬಿದಿರೆ : ಸಾಂಪ್ರಾದಾಯಿಕ ಕಂಬಳಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಕಂಬಳಗಳಲ್ಲಿ ಬೆಳಿಗ್ಗೆ 9.೦೦ಗಂಟೆಗೆ ಕೋಣಗಳನ್ನು ಕರೆಗೆ ಇಳಿಸಿ 24 ಗಂಟೆಗಳೊಳಗೆ ಮುಗಿಸುವ ಸಂಪೂರ್ಣ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಆಯಾಯ ಸ್ಥಳಿಯ ಕಂಬಳದ ವ್ಯವಸ್ಥಾಪಕರು ಶಿಸ್ತನ್ನು ಕೈಗೊಳ್ಳುವ ಬಗ್ಗೆ ಹಾಗೂ ಕಂಬಳದ ಪ್ರತಿ ಓಟಗಾರರು ಮೂರು ಜತೆ ಕೋಣಗಳನ್ನು ಮಾತ್ರ ಆಯಾಯ ಕಂಬಳಗಳಲ್ಲಿ ಓಡಿಸಬಹುದು. ಆದರೆ 2 ಜತೆ (ಎ,ಬಿ) ಕೋಣಗಳ ಯಜಮಾನರ ಇಬ್ಬರು ಓಟಗಾರರ ಪೈಕಿ ಒಬ್ಬರಿಗೆ ಗಂಭೀರ ಸ್ವರೂಪದ ಗಾಯದ ಸಮಸ್ಯೆ, ಅಸೌಖ್ಯದ ಕಾರಣ ಅಥವಾ ಅಮೆ, ಕರ, ಸೂತಕಾದಿ ಸಮಸ್ಯೆಗಳು ಎದುರಾದಲ್ಲಿ ಇನ್ನೊಂದು ಜತೆ ಕೋಣಗಳನ್ನು ಹೆಚ್ಚುವರಿಕೆಯಾಗಿ ಓಡಿಸಲು ಅವಕಾಶ ನೀಡುವ ಕುರಿತು ಸಮಾಜ ಮಂದಿರದಲ್ಲಿ ಬುಧವಾರ ನಡೆದ ಕಂಬಳ ಶಿಸ್ತು ಪಾಲನಾ ಸಮಿತಿಯಲ್ಲಿ ಚರ್ಚಿಸಿ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು.


ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂಬಳಕ್ಕೆ ಸಂಬಂಧಪಟ್ಟ ಹಲವು ವಿಷಯಗಳ ಬದಲಾವಣೆಗಳ ಬಗ್ಗೆ ಚರ್ಚಿಸಲಾಯಿತು. ಗಂತಿನ ಮತ್ತು ಮಂಜೊಟ್ಟಿಯ ತೀರ್ಪುಗಾರರ ಕೌಂಟರ್‌ಗಳಿಗೆ ತೀರ್ಪುಗಾರರು ಹೊರತುಪಡಿಸಿ ಇತರಿಗೆ ಪ್ರವೇಶ ನಿಷೇಧ ಮತ್ತು ಈ ಬಗ್ಗೆ ಸಂಪೂರ್ಣ ಬಂದೋಬಸ್ತು ಮಾಡಲಾಗುವುದು. ಯಾವುದೇ ಕಂಬಳ ನಡೆಯುವ ಸಂದರ್ಭಗಳಲ್ಲಿ ಯಜಮಾನರಿಗೆ ಅಥವಾ ತೀರ್ಪುಗಾರರಿಗೆ ಸಮಸ್ಯೆಗಳು ಎದುರಾದಲ್ಲಿ ಕೂಡಲೇ ಆ ಸಮಸ್ಯೆಯನ್ನು ಜಿಲ್ಲಾ ಕಂಬಳ ಸಮಿತಿ ಮತ್ತು ಕಂಬಳ ಆಯೋಜಕ ಸಮಿತಿ ಇತ್ಯರ್ಥಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ತೀರ್ಪುಗಾರರು ಕಾರ್ಯನಿರ್ವಹಿಸುವ ಸಂದರ್ಭಗಳಲ್ಲಿ ಸದ್ರಿ ತೀರ್ಪುಗಾರರ ಬಗ್ಗೆ ಆಶಿಸ್ತಿನ ನಡವಳಿಕೆ ಸಲ್ಲದು. ಈ ಬಗ್ಗೆ ಶಿಸ್ತು ಉಲ್ಲಂಘನೆಯಾದಲ್ಲಿ ಜಿಲ್ಲಾ ಕಂಬಳ ಸಮಿತಿ ಕಾರ್ಯಕಾರು ಸಮಿತಿಯ ಸಭೆಯನ್ನು ಮೂರು ದಿನಗಳಲ್ಲಿ ಕರೆದು, ತಪ್ಪಿತಸ್ಥರ ಬಗ್ಗೆ ತೀರ್ಮಾನ ಕೈಗೊಂಡು ಅಮಾನತಿನಂತಹ ಶಿಕ್ಷೆಗೆ ಒಳಪಡಿಸಬಹುದು. ಅಮಾನತಿನ ಪ್ರಮಾಣ ಹಾಗೂ ಶಿಕ್ಷೆಯ ಸ್ವರೂಪವನ್ನು ಮುಂದಿನ ಸಭೆಯಲ್ಲಿ ತೀರ್ಮಾನಿಸುವ ಕುರಿತು ಮಾತುಕತೆ ನಡೆಯಿತು. ಕಂಬಳದಲ್ಲಿ ತೀರ್ಪುಗಾರರು ತೀರ್ಪು ನೀಡುವ ಸಂದರ್ಭ ಮಧ್ಯಪಾನವನ್ನು ಮಾಡಿದ್ದರೆ ಅವರಿಗೂ ಕಾನೂನು ಕ್ರಮ ಜರುಗಿಸಬೇಕೆಂಬ ಸಭೆಯಲ್ಲಿ ಕೇಳಿ ಬಂತು.
ಶಿಸ್ತು ಪಾಲನಾ ಸಮಿತಿಯ ಸದಸ್ಯರಾದ ಎರ್ಮಾಳ್ ರೋಹಿತ್ ಹೆಗ್ಡೆ, ರೆಂಜಾಳ ಕಾರ್ಯ ಸುರೇಶ್ ಕೆ.ಪೂಜಾರಿ, ರಾಜೀವ್ ಶೆಟ್ಟಿ ಇರ್ವತ್ತೂರು, ಸಾಂಪ್ರಾದಾಯಿಕ ಕಂಬಳದ ಬೈಂದೂರು ವೆಂಕಟ ಪೂಜಾರಿ ಉಪಸ್ಥಿತರಿದ್ದರು.
ವಿಜಯಕುಮಾರ್ ಕಂಗಿನ ಮನೆ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.