ರಾಜ್ಯದ ಮುಖ್ಯಮಂತ್ರಿಯಿಂದ ಪಕ್ಷಪಾತ ಧೋರಣೆ :ಜೆಡಿಎಸ್ ಆರೋಪ

ಪುತ್ತೂರು:ಜಿಲ್ಲೆಯಲ್ಲಿ ಮೂರು ಹತ್ಯೆಗಳಾಗಿದ್ದು, ಈ ಮೂವರ ಮನೆಗೆ ತೆರಳಿ ಸಾಂತ್ವನ ಹೇಳಬೇಕಾಗಿದ್ದ, ಪರಿಹಾರ ನೀಡಬೇಕಾಗಿದ್ದ ರಾಜ್ಯದ ಮುಖ್ಯಮಂತ್ರಿಗಳ ಪಕ್ಷಪಾತ ಧೋರಣೆಯನ್ನು ಜೆಡಿಎಸ್ ಪಕ್ಷ ಖಂಡಿಸುತ್ತದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ ತಿಳಿಸಿದ್ದಾರೆ.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿರುವಾಗಲೇ ಸುರತ್ಕಲ್‍ನಲ್ಲಿ ಫಾಝಲ್ ಹತ್ಯೆಯಾಗಿದೆ. ಅಲ್ಲದೆ ಬೆಳ್ಳಾರೆಯಲ್ಲಿ ಮೃತ ಪ್ರವೀಣ್ ಮನೆಗೆ ಮಾತ್ರ ಭೇಟಿ ನೀಡಿ ಮಸೂದ್ ಹಾಗೂ ಫಾಝಲ್ ಮನೆಗೆ ಭೇಟಿ ನೀಡದೇ ತಾರತಮ್ಯ ಮಾಡಿರುವ ಮುಖ್ಯಮಂತ್ರಿ ನಾಲಾಯಕು ಮುಖ್ಯಮಂತ್ರಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ಸೋಮವಾರ ಪುತ್ತೂರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೂವರ ಮನೆಗೆ ತೆರಳಿ ಸಾಂತ್ವನ ಹೇಳಿ, ಧನ ಸಹಾಯ ಚೆಕ್‍ನ್ನು ವಿತರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಈಗಾಗಲೇ ಜಿಲ್ಲೆಯಲ್ಲಿ ಮೂರು ಹತ್ಯೆಗಳನ್ನು ಮಾಡಿದ ನೈಜ ಆರೋಫಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಈಗಾಗಲೇ ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್‍ಐಎಗೆ ಒಪ್ಪಿಸಿದ್ದಾರೆ. ಮೂವರ ಹತ್ಯೆ ಪ್ರಕರಣವನ್ನು ಎನ್‍ಐಗೆ ತನಿಖೆಗೆ ಒಪ್ಪಿಸದೆ ಹಾಲಿ ನ್ಯಾಯಾಧೀಶರ ಮೂಲಕ ತನಿಖೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತ್ಯಕ್ರಿಯೆ ಸಂದರ್ಭ ಕೇರಳದ ಆರ್‍ಎಸ್‍ಎಸ್, ಬಿಜೆಪಿ ಗೂಂಡಾಗಳು ಬೆಳ್ಳಾರೆಗೆ ಬಂದು ದಾಂಧಲೆ ನಡೆಸಿ ಸೊತ್ತುಗಳನ್ನು ಹಾಳುಮಾಡಿದ್ದಾರೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಐ.ಸಿ.ಕೈಲಾಸ್, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಪ್ರಭಾಕರ ಸಾಲ್ಯಾನ್, ನಗರ ಕಾರ್ಯದರ್ಶಿ ಅಶ್ವಿನ್ ಕಲ್ಲೇಗ, ಅದ್ದು ಕೆದುವಡ್ಕ,ಶಿವ ಸಾಲ್ಯಾನ್, ರಾಧಾಕೃಷ್ಣ ಸಾಲ್ಯಾನ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.