ಶ್ರೀನಿವಾಸ ಹೊಟೇಲ್ ಕಟ್ಟಡದ ಕುಸಿತದ ವದಂತಿ: ಗಾಳಿ ಸುದ್ದಿ ಎಬ್ಬಿಸಿತ್ತು ವಾಟ್ಸಪ್ ಬಿರುಗಾಳಿ
ಮಂಗಳೂರಿನ ಹಂಪನಕಟ್ಟೆಯ ಶ್ರೀನಿವಾಸ ಹೊಟೇಲ್ ಕಟ್ಟಡ ಕುಸಿತದ ಭೀತಿ ಎದುರಿಸುತ್ತಿದೆ.
ಕಟ್ಟಡ ಕುಸಿಯುವ ಭೀತಿಯಿಂದಾಗಿ ಆ ಭಾಗದಲ್ಲಿ ಪೊಲೀಸರು ರಸ್ತೆ ಸಂಚಾರವನ್ನು ಕಡಿತಗೊಳಿಸಿದ್ದಾರೆ ಎಂಬ ವದಂತಿ ಹರಡಿದೆ. ಈ ಬಗ್ಗೆ ಶ್ರೀನಿವಾಸ ಕಾಲೇಜ್ ಆಫ್ ಹೊಟೇಲ್ ಮ್ಯಾನೇಜ್ಮೆಂಟಿನ ನಿರಂಜನ್ ರಾವ್ ಬಳಿ ಮಾಹಿತಿ ಕೇಳಿದಾಗ, ವಾಟ್ಸಪ್ ನಲ್ಲಿ ಏನೇನೋ ಬರುತ್ತಿರುವುದು ಗಮನಕ್ಕೆ ಬಂದಿದೆ. ಕಟ್ಟಡದ ಕೆಲವು ಕಡೆ ನವೀಕರಣದ ಕಾಮಗಾರಿ ನಡೆಯುತ್ತಿದೆ. ಮಳೆಯಿಂದಾಗಿ ಕೆಲಸಕ್ಕೆ ಅಡ್ಡಿಯಾಗಿದೆ.
ಕಿಟಕಿ ಭಾಗದಲ್ಲಿ ಕವರಿಂಗ್ ಕೆಲಸ ನಡೆಯುತ್ತಿದ್ದು ಸಿಮೆಂಟ್ ಚಪ್ಪಡಿ ಕೆಳಗೆ ಬಿದ್ದು ಯಾರದಾದ್ರೂ ತಲೆಗೆ ಬೀಳುವುದು ಬೇಡ ಎಂದು ಟರ್ಪಾಲ್ ಹಾಕಿ ಮುಚ್ಚಲಾಗಿದೆ. ಇದು ಬಿಟ್ಟರೆ, ಇಡೀ ಕಟ್ಟಡ ಕುಸಿಯುವಂಥದ್ದೇನು ನಡೆದಿಲ್ಲ. ಟರ್ಪಾಲ್ ಹಾಕಿದ್ದು ಮತ್ತು ಕೆಲಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ಕಡೆ ಸಿಮೆಂಟ್ ಅಗೆದಿರುವುದನ್ನು ನೋಡಿ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಈ ಬಗ್ಗೆ ಮಂಗಳೂರು ನಗರ ಟ್ರಾಫಿಕ್ ಎಸಿಪಿ ನಟರಾಜ್ ಬಳಿ ಕೇಳಿದರೆ, ಜಾಲತಾಣದಲ್ಲಿ ಈ ರೀತಿ ವದಂತಿ ಹರಡುತ್ತಿರುವುದು ತಿಳಿದುಬಂದಿದೆ. ಆದರೆ, ಅಂತಹ ಯಾವುದೇ ಮಾಹಿತಿ ಇಲ್ಲ. ಶ್ರೀನಿವಾಸ ಹೊಟೇಲ್ ಕಟ್ಟಡದಲ್ಲಿ ಕೆಲಸ ನಡೆಯುತ್ತಿರುವುದು ಗೊತ್ತಿದೆ. ಅದನ್ನೇ ಕೆಲವರು ತಪ್ಪಾಗಿ ಅರ್ಥೈಸಿ ಈ ರೀತಿ ಸುದ್ದಿ ಹಬ್ಬಿಸಿದ್ದಾರೆ ಎಂದು ತಿಳಿಸಿದ್ದಾರೆ.