ಸರ್ಕಾರಕ್ಕೆ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಕಾನೂನು ನೊಟೀಸ್
ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮೊದಲ ಡೋಸ್ ಲಸಿಕೆ ಹಾಕಿದ ಬಳಿಕವಷ್ಟೇ ಶಾಲಾ ಕಾಲೇಜುಗಳನ್ನು ಪುನರಾಂಭಿಸಲಾಗುವುದು ಉನ್ನತ ಶಿಕ್ಷಣ ಸಚಿವರು ನೀಡಿರುವ ಹೇಳಿಕೆಯು ಕಾನೂನಿಗೆ ವಿರುದ್ಧವಾದುದು ಹಾಗೂ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸುವಂತಹದ್ದು, ಇದನ್ನು ಪ್ರಶ್ನಿಸಿ ಸರಕಾರಕ್ಕೆ ಕಾನೂನು ನೊಟೀಸ್ ಜಾರಿ ಮಾಡಿರುವುದಾಗಿ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ತಿಳಿಸಿದ್ದಾರೆ.
ವೀ ಫೋರ್ ನ್ಯೂಸ್ ಕರ್ನಾಟಕ ವಾಹಿನಿಯ ಶನಿವಾರದ ವಿಶೇಷ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದರು.ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರ ವತಿಯಿಂದ ಸರಕಾರಕ್ಕೆ ಈ ಕಾನೂನು ನೋಟೀಸ್ನ್ನು ಜಾರಿಗೊಳಿಸಲಾಗಿದೆ. ವಕೀಲ ಚಿದಾನಂದ ಅವರ ಮೂಲಕ ಸರಕಾರಕ್ಕೆ ನೋಟೀಸ್ ನೀಡಲಾಗಿದೆ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರು ತಿಳಿಸಿದರು.
ಲಸಿಕೆ ಹಾಕಿಸಿಕೊಳ್ಳುವುದು ಜನರ ಇಚ್ಛೆಗೆ ಬಿಟ್ಟಿರುವಂತಹದು, ಕೇಂದ್ರ ಸರಕಾರ ಕೂಡ ಇದನ್ನು ಸ್ಪಷ್ಟವಾಗಿ ಹೇಳಿದೆ. ಇನ್ನೂ ಗುಜರಾತ್ ಹಾಗೂ ಮೇಘಾಲಯ ಹೈಕೋರ್ಟ್ ಗಳು ಈ ನಿಟ್ಟಿನಲ್ಲಿ ಈಗಾಗಲೇ ತೀರ್ಪು ಕೂಡ ನೀಡಿದ್ದು, ಲಸಿಕೆಯನ್ನು ಕಡ್ಡಾಯ ಎಂದು ಘೋಷಿಸುವಂತಿಲ್ಲ ಎಂದು ತೀರ್ಪು ನೀಡಿದೆ. ಈಗಿರುವಾಗ ಶಾಲೆಗಳನ್ನು ತೆರೆಯಲು ಲಸಿಕೆ ಕಡ್ಡಾಯ ಎಂಬುದಾಗಿ ಶಿಕ್ಷಣ ಸಚಿವರು ಹೇಳುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅಭಿಪ್ರಾಯ ಪಟ್ಡಿದ್ದಾರೆ.