ಹೊಸ ಕಾರು ಖರೀದಿಯಲ್ಲಿ ವೈಷಮ್ಯ: ಕುತ್ತಿಗೆ ಕೊಯ್ದು ಫೈನಾನ್ಶಿಯರ್ ಬರ್ಬರ ಹತ್ಯೆ

ಕುಂದಾಪುರ: ಕೋಟೇಶ್ವರದ ಕಾಳಾವರ ಸಮೀಪದಲ್ಲಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಯುವಕನೋರ್ವನ ಕುತ್ತಿಗೆ ಕೊಯ್ದು ಭೀಕರವಾಗಿ ಹತ್ಯೆಗೈದಿದ್ದು, ಹತ್ಯೆಗೆ ಹಣಕಾಸಿನ ವ್ಯವಹಾರ ಹಾಗೂ ಹೊಸ ಕಾರು ಖರೀದಿ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತಾಲೂಕಿನ ಯಡಾಡಿ ಮತ್ಯಾಡಿ ಕೂಡಾಲು ನಿವಾಸಿ ಅಜೇಂದ್ರ ಶೆಟ್ಟಿ (33) ಕೊಲೆಯಾದ ಯುವಕ. ಮೇಲ್ನೋಟಕ್ಕೆ ಹಣಕಾಸಿನ ವಿಚಾರದಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದ್ದು, ಫೈನಾನ್ಸ್ ಪಾಲುದಾರ ಅನೂಪ್ ಮೇಲೆ ಅನುಮಾನ ಇರುವುದಾಗಿ ಅಜೇಂದ್ರ ಅವರ ಸಹೋದರ ಮಹೇಂದ್ರ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಯ ವಿವರ:

ಅಜೇಂದ್ರ ಶೆಟ್ಟಿ ಕಳೆದ ಕೆಲ ವರ್ಷಗಳಿಂದ ಅಸೋಡು-ಕಾಳಾವರ ಎಂಬಲ್ಲಿ ಸ್ನೇಹಿತ ಅನೂಪ್ ಜೊತೆ ಪಾಲುದಾರಿಕೆಯೊಂದಿಗೆ ಡ್ರೀಮ್ ಫೈನಾನ್ಸ್ ಎನ್ನುವ ಫೈನಾನ್ಸ್ ಸಂಸ್ಥೆಯನ್ನು ನಡೆಸುತ್ತಿದ್ದರು. ಯಾವಾಗಲೂ ರಾತ್ರಿ ಹತ್ತು ಗಂಟೆಯೊಳಗೆ ಮನೆ ಸೇರುತ್ತಿದ್ದ ಅಜೇಂದ್ರ ಶುಕ್ರವಾರ ರಾತ್ರಿಯಾದರೂ ಮನೆಗೆ ಬರಲಿಲ್ಲ. ಮನೆಯವರು ಅಜೇಂದ್ರ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಒಂದು ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಇನ್ನೊಂದು ಮೊಬೈಲ್‌ನಲ್ಲಿ ಕರೆ ಸ್ವೀಕರಿಸುತ್ತಿರಲಿಲ್ಲ. ಅನುಮಾನಗೊಂಡ ಮನೆಯವರು ಅಜೇಂದ್ರ ಶೆಟ್ಟಿ ಸ್ನೇಹಿತ ರಕ್ಷಿತ್‌ಗೆ ಕರೆ ಮಾಡಿ ಫೈನಾನ್ಸ್ ಕಚೇರಿಗೆ ಹೋಗಿ ನೋಡಲು ತಿಳಿಸಿದರು. ರಕ್ಷಿತ್ ಹಾಗೂ ಸ್ನೇಹಿತರು ತಡರಾತ್ರಿ ಕಚೇರಿಗೆ ಬಂದು ನೋಡಿದಾಗ ಶಟರ್ ಬಾಗಿಲು ಹಾಕಿತ್ತು. ಬೀಗ ಹಾಕಿಲ್ಲದ ಕಾರಣ ಶಟರ್ ಮೇಲೆತ್ತಿ ಮೊಬೈಲ್ ಬೆಳಕಿನಲ್ಲಿ ನೋಡಿದಾಗ ಅಜೇಂದ್ರ ರಕ್ತದ ಮಡುವಲ್ಲಿ ಸೋಫಾದ ಮೇಲೆ ಒರಗಿ ಕುಳಿತಿದ್ದರು. ಕೂಡಲೇ ಅಜೇಂದ್ರ ಅವರ ಸಹೋದರ ಮಹೇಂದ್ರ ಅವರಿಗೆ ಕರೆ ಮಾಡಿದ ಸ್ನೇಹಿತರು ಅಜೇಂದ್ರ ಅವರನ್ನು ಕೋಟೇಶ್ವರದ ಎನ್‌ಆರ್ ಆಚಾರ್ಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೆ ಅಜೇಂದ್ರ ಕೊನೆಯುಸಿರೆಳೆದಿದ್ದಾರೆ.kundapura murder

ಅನೂಪ್ ಮೇಲೆ ಹೆಚ್ಚಿದ ಅನುಮಾನ:

ಅಜೇಂದ್ರ ಶೆಟ್ಟಿ ಹತ್ಯೆಯ ಬಳಿಕ ಅನೂಪ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಶುಕ್ರವಾರ ರಾತ್ರಿ ಅಜೇಂದ್ರ ಹಾಗೂ ಅನೂಪ್ ಕಚೇರಿಯಲ್ಲಿ ಜೊತೆಯಲ್ಲಿದ್ದರು ಎಂದು ಪಕ್ಕದ ಅಂಗಡಿಯವರು ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಹಣಕಾಸಿನ ವಿಚಾರಕ್ಕೆ ಅನೂಪ್ ಹತ್ಯೆಗೈದಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೇ ಅನೂಪ್ ತನ್ನ ಬುಲೆಟ್ ಬೈಕ್ ಫೈನಾನ್ಸ್ ಅಂಗಡಿಯ ಎದುರಲ್ಲೇ ಇಟ್ಟು ಅಜೇಂದ್ರ ಅವರ ಹೊಸ ಕಾರಲ್ಲಿ ತೆರಳಿದ್ದಾನೆ ಎನ್ನಲಾಗಿದೆ. ಹೀಗಾಗಿ ತಡರಾತ್ರಿಯೇ ಪೊಲೀಸರು ಅನೂಪ್ ಪತ್ತೆಗೆ ಬಲೆಬೀಸಿದ್ದಾರೆ.

ಹೊಸ ಕಾರು ಖರೀದಿಯಲ್ಲಿ ಅಸಮಧಾನ:
ಈ ಹಿಂದೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಜೇಂದ್ರ ಶೆಟ್ಟಿಯ ಜೊತೆ ಅನೂಪ್ ಗಲಾಟೆ ಮಾಡಿರುವ ವಿಚಾರ ಅಜೇಂದ್ರ ತಮ್ಮ ಸಹೋದರ ಮಹೇಂದ್ರ ಅವರ ಜೊತೆ ಹೇಳಿಕೊಂಡಿದ್ದರು. ಅಲ್ಲದೇ ಇತ್ತೀಚೆಗಷ್ಟೇ ಅಜೇಂದ್ರ ಅವರು ಹೊಸ ಕಾರೊಂದನ್ನು ಖರೀದಿಸಿದ್ದರು. ಇದೇ ವಿಚಾರವಾಗಿ ಅನೂಪ್‌ಗೆ ಅಜೇಂದ್ರ ಅವರ ಮೇಲೆ ಅಸಮಧಾನವಿತ್ತು. ಇದೇ ವೈಮನಸ್ಸಿನಿಂದ ನನ್ನ ತಮ್ಮ ಅಜೇಂದ್ರನನ್ನು ಅನೂಪ್ ಹಲ್ಲೆ ಮಾಡಿ ಕೊಲೆಗೈದಿರಬೇಕು ಎಂದು ಅನುಮಾನಿಸಿ ಸಹೋದರ ಮಹೇಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ನೇಹಮಯಿ ಅಜೇಂದ್ರ ಶೆಟ್ಟಿ:

ಅಜೇಂದ್ರ ಶೆಟ್ಟಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರೂ ಯಾರೊಂದಿಗೂ ದ್ವೇಷ ಬೆಳೆಸಿಕೊಂಡಿರಲಿಲ್ಲ. ಮಾರ್ಕೆಟಿಂಗ್ ವಿಭಾಗದಲ್ಲಿ ಪರಿಣಿತಿ ಹೊಂದಿದ್ದ ಅವರು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಅಜೇಂದ್ರ ಅವರ ಮನೆ ಬಿದ್ಕಲ್‌ಕಟ್ಟೆ ಸಮೀಪದ ಕೂಡಾಲ್ ಆದರೂ ಅವರ ಕಚೇರಿ ಕಾಳಾವರದಲ್ಲಿದ್ದರಿಂದ ಕಾಳಾವರ, ಕಟ್ಕೆರೆ, ಅಸೋಡು ಭಾಗದ ಜನರಿಗೆ ತುಂಬಾ ಪ್ರೀತಿ ಪಾತ್ರರಾಗಿದ್ದರು. ಅಜೇಂದ್ರ ಅವರು ತಮ್ಮ ಸ್ವಪರಿಶ್ರಮದಿಂದಲೇ ಫೈನಾನ್ಸ್ ಉದ್ಯಮ ಆರಂಭಿಸಿದ್ದರು. ಎರಡು ತಿಂಗಳ ಹಿಂದಷ್ಟೇ ತಮ್ಮ ಕಾರು ಅಪಘಾತಕ್ಕೀಡಾದ ಕಾರಣ ಆ ಕಾರನ್ನು ಮಾರಾಟ ಮಾಡಿ ಹೊಸ ಕಾರನ್ನು ಖರೀದಿಸಿದ್ದರು.

ಸದ್ಯ ಅಜೇಂದ್ರ ಅವರ ಮೃತದೇಹ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಆ ಬಳಿಕ ಹೆಚ್ಚಿನ ತನಿಖೆಗಾಗಿ ಮರಣೋತ್ತರ ಪರೀಕ್ಷೆ ನಡೆಸಲು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ವಿಧಿವಿಜ್ಙಾನ ತಜ್ಙರು ಭೇಟಿ ನೀಡಿ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಶ್ರೀಕಾಂತ್, ಸಿಪಿಐ ಗೋಪಿಕೃಷ್ಣ, ಕಂಡ್ಲೂರು ಠಾಣಾಧಿಕಾರಿ ನಿರಂಜನ್ ಮತ್ತಿತರರು ಭೇಟಿ ನೀಡಿ ಮಹತ್ತರವಾದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

Related Posts

Leave a Reply

Your email address will not be published.