ಅಡಿಕೆ ಮರ ಏರುವ ಬೈಕ್ ಆವಿಷ್ಕಾರ

ಬಂಟ್ವಾಳ: ಅಡಿಕೆ ಮರ ಏರುವ ಬೈಕ್ ಆವಿಷ್ಕರಿಸಿ ಜಗತ್ತಿನ ಗಮನ ಸೆಳೆದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಪ್ರಗತಿಪರ ಕೃಷಿಕ, ಸಂಶೋಧಕ ಗಣಪತಿ ಭಟ್ ಮತ್ತೊಮ್ಮೆ ಸುದ್ದಿಯಾಗುತ್ತಿದ್ದಾರೆ. ಮುಂದಿನ ವಿಶ್ವ ಟಿ-20 ಕ್ರಿಕೆಟ್ ಟೂರ್ನಿ ಸಂದರ್ಭ ಭಾರತ ಗೆದ್ದು ಬರುವಂತೆ ಜಾಹೀರಾತಿನಲ್ಲಿ ಗಣಪತಿ ಭಟ್, ಭಾರತ ಕ್ರಿಕೆಟ್ ತಂಡದ ಸದಸ್ಯರಿಗೆ ಚಿಯರ್ಸ್ ಮಾಡಲಿದ್ದಾರೆ. ಸ್ಟಾರ್ ಸ್ಪೋಟ್ಸ್ ಚಾನಲ್ ಈ ಅವಕಾಶವನ್ನು ಗ್ರಾಮೀಣ ಭಾಗದ ಒರ್ವ ಕೃಷಿಕನಿಗೆ ನೀಡಿದ್ದು, ಭಾರತದ ತ್ರಿವರ್ಣ ಪತಾಕೆಯನ್ನು ಹಿಡಿದು ಕೊಂಡು ತಾನೇ ಆವಿಷ್ಕರಿಸಿದ ಟ್ರೀ ಬೈಕ್ ಮೂಲಕ ಅಡಿಕೆ ಮರವೇರುತ್ತಾ ಭಾರತ ತಂಡವನ್ನು ಹುರಿದುಂಬಿಸಲಿದ್ದಾರೆ.
ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೋಮಾಲಿಯ ಪ್ರಗತಿಪರ ಕೃಷಿಕ ಗಣಪತಿ ಭಟ್ ಅವರು ಕೃಷಿ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಳೆದ 2019ರಲ್ಲಿ ಇಂಧನ ಚಾಲಿತ ದೇಶಿಯ ಟ್ರೀ ಬೈಕ್ ಆವಿಷ್ಕರಿಸಿದ್ದರು. ಸುಧಾರಿತ ವಿಧಾನದ ಈ ಬೈಕ್ ಕಡಿಮೆ ಅವಧಿಯಲ್ಲಿ ರೈತರ ಗಮನ ಸೆಳೆದಿರುವುದಲ್ಲದೆ ದೇಶ ವಿದೇಶಗಳಲ್ಲೂ ಜನಪ್ರಿಯತೆ ಪಡೆದು ಬೇಡಿಕೆ ಸೃಷ್ಟಿಸಿತ್ತು. ಗಣಪತಿ ಭಟ್ ಅವರ ಕೃಷಿ ಸಾಧನೆಯ ಯಶೋಗಾಥೆ ಸ್ಥಳೀಯ ಮಾಧ್ಯಮಗಳಲ್ಲಿ ಮಾತ್ರವಲ್ಲದೆ ದಿ ಹಿಸ್ಟರಿ ಚಾನೆಲ್‍ನಲ್ಲೂ ಪ್ರಕಟಗೊಂಡಿತ್ತು. ಇದರಿಂದ ಪ್ರೇರಿತಗೊಂಡಂತಹ ಸ್ಟಾರ್ ಸ್ಪೋಟ್ಸ್ ಚಾನೆಲ್ ಮುಂದಿನ ಟಿ- ಟ್ವೆಂಟಿ ಪಂದ್ಯದ ವೇಳೆ ಭಾರತ ಕ್ರಿಕೆಟ್ ತಂಡವನ್ನು  ಹುರಿದುಂಬಿಸಲು ತನ್ನ ಜಾಹೀರಾತಿನಲ್ಲಿ ದೇಸಿ ನಿರ್ಮಿತ ಟ್ರೀ ಬೈಕ್‍ನ್ನು ಬಳಸಲು ತೀರ್ಮಾನಿಸಿದೆ. ಆಮೂಲಕ ಗ್ರಾಮೀಣ ಭಾಗದ ರೈತನಾದ ಗಣಪತಿ ಭಟ್ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಈ ವಿಶೇಷ ಅವಕಾಶ ಅರಸಿ ಬಂದಿದೆ.

ಸ್ಟಾರ್ ಸ್ಪೋಟ್ಸ್ ಚಾನೆಲ್‍ನ ತಂಡ ಕಳೆದ ಮೂರು ದಿನಗಳಿಂದ ಗಣಪತಿ ಭಟ್ ಅವರ ಸಜೀಪಮೂಡದ ಕೋಮಾಲಿಯ ಮನೆಯಲ್ಲಿ ಬೀಡು ಬಿಟ್ಟು ಶೂಟಿಂಗ್ ಪೂರ್ಣಗೊಳಿಸಿದೆ. ಗಣಪತಿ ಭಟ್, ಅವರ ಮಗಳು ಸುಪ್ರಿಯಾ ಭಟ್ ಹಾಗೂ ಮಗ ಶ್ರೀವರ ಭಟ್ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಟ್ರೀ ಬೈಕ್‍ನಲ್ಲಿ ಅಡಿಕೆ ಮರವನ್ನೇರುತ್ತಾ ಭಾರತ ಗೆದ್ದು ಬರುವಂತೆ ಶುಭ ಹಾರೈಸುವ ಚಿತ್ರಗಳನ್ನು ಚಿತ್ರೀಕರಿಸಲಾಗಿದೆ. ಅಲ್ಲದೆ ಅವರ ಅಡಿಕೆ ತೋಟ, ಮನೆಯಂಗಳ, ಒಳಾಂಗಣದಲ್ಲಿ ಕ್ರಿಕೆಟ್ ಆಡುವ ದೃಶ್ಯಗಳನ್ನು ಚಿತ್ರೀಕರಣ ನಡೆಸಿದ್ದು ಇಂಗ್ಲೀಷ್, ಹಿಂದಿ, ಕನ್ನಡ ಮಾತ್ರವಲ್ಲದೆ ತುಳು ಭಾಷೆಯಲ್ಲೂ ಕ್ರಿಕೆಟ್ ತಂಡವನ್ನು ಹುರಿದುಂಬಿಸುವ ದೃಶ್ಯಗಳನ್ನು ತಂಡ ಚಿತ್ರೀಕರಿಸಿಕೊಂಡಿದೆ. ಒಟ್ಟು 5 ನಿಮಿಷದ ಈ ತುಣುಕು ಕ್ರಿಕೆಟ್ ವಿರಾಮದ ವೇಳೆಯಲ್ಲಿ ಪ್ರಸಾರಗೊಳ್ಳಲಿದೆ. ರೈತರು ನಾವು ಕೂಡ ಕ್ರಿಕೆಟ್ ಅಭಿಮಾನಿಗಳು, ಹೇಗೆ ನಮ್ಮ ಭಾರತದ ಆವಿಷ್ಕಾರವಾದ ಟ್ರೀಬೈಕ್ ದೇಶ ವಿದೇಶಗಳಲ್ಲೂ ಯಶಸ್ವಿಯಾಗಿದೆಯೋ ಅದೇ ರೀತಿ ನಮ್ಮ ಭಾರತದ ಕ್ರಿಕೆಟ್ ತಂಡವೂ ವಿಶ್ವದೆಲ್ಲೆಡೆ ಗೆದ್ದು ಬರಲಿ ಎನ್ನುವ ಸಂದೇಶವನ್ನು ಗಣಪತಿ ಭಟ್ ಅವರು ಈ ಜಾಹೀರಾತಿನ ಮೂಲಕ ನೀಡುತ್ತಾರೆ.

ಗಣಪರಿ ಭಟ್ ಆವಿಷ್ಕರಿಸಿದ ಅಡಕೆ ಮರವೇರುವ ಬೈಕ್‍ಗೆ ದೇಶ ವಿದೇಶಗಳಿಂದ ಬೇಡಿಕೆ ಬರುತ್ತಿದೆ. ಕೇವಲ 2 ವರ್ಷಗಳಲ್ಲಿ ಎಂಟು ನೂರಕ್ಕೂ ಅಧಿಕ ಟ್ರೀ ಬೈಕನ್ನು ತಯಾರಿಸಿ, ರೈತರಿಗೆ ಮಾರಾಟ ಮಾಡಿದ್ದಾರೆ. ಇದೇ ಮಾದರಿಯಲ್ಲಿ ತೆಂಗಿನ ಮರ ಏರುವ ಬೈಕನ್ನು ಗಣಪತಿ ಭಟ್ ಆವಿಷ್ಕರಿಸಿದ್ದು ಅಪಾರ ಬೇಡಿಕೆಯಿದೆ. ಶಿವಮೊಗ್ಗದ ಮೆಬೆನ್ ಇಂಜಿನಿಯರಿಂಗ್ ಸೊಲ್ಯುಷನ್ ಸಂಸ್ಥೆ ಈ ಎರಡು ಯಂತ್ರಗಳನ್ನು ತಯಾರಿಸುತ್ತಿದೆ. ತೆಂಗಿನ ಮರ ಏರುವ ಟ್ರೀ ಬೈಕಿಗೆ ಸರ್ಕಾರದಿಂದ ಸಬ್ಸಿಡಿಯೂ ಲಭ್ಯವಿದೆ. ಈ ಯಂತ್ರ ತಯಾರಿಸಿ ರೈತರಿಂದ ಯಾವುದೇ ಲಾಭ ಪಡೆಯುತ್ತಿಲ್ಲ, ಬದಲಾಗಿ ಅದರ ನಿರ್ಮಾಣ ವೆಚ್ಚವನ್ನಷ್ಟೇ ಪಡೆಯುತ್ತಿದ್ದೇನೆ, ಹೆಚ್ಚು ಗ್ರಿಪ್ ಹಾಗೂ ಮೋಲ್ಡೆಡ್ ಟಯರ್ ಇರುವ ಸುಧಾರಿತ ವಿಧಾನದ ಟ್ರೀ ಬೈಕ್ ಈಗ ಲಭ್ಯವಿದೆ ಎನ್ನುವ ಗಣಪತಿ ಭಟ್ ರೈತರಿಗೆ ಯಾವುದೇ ಸಮಯದಲ್ಲೂ ಉಚಿತ ಪ್ರಾತ್ಯಕ್ಷಿಕೆ ನೀಡಲು ಸಿದ್ದನಿರುವುದಾಗಿ ತಿಳಿಸುತ್ತಾರೆ.

Related Posts

Leave a Reply

Your email address will not be published.