ಆತಂಕ ಸೃಷ್ಟಿಸಿದ ಚಾಲಕ: ಬರೋಬ್ಬರಿ ನಾಲ್ಕು ಕಿ.ಮೀ ತನಕ ಬ್ಯಾರಿಕೇಡ್ ಎಳೆದೊಯ್ದ ಕಂಟೇನರ್!

ಕುಂದಾಪುರ: ವಿಪರೀತ ಮದ್ಯ ಸೇವಿಸಿದ ಚಾಲಕನೋರ್ವ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಯದ್ವಾತದ್ವ ಕಂಟೇನರ್ ಚಲಾಯಿಸಿ ಕೆಲಹೊತ್ತು ಆತಂಕ ಸೃಷ್ಠಿಸಿದ ಘಟನೆ ತಾಲೂಕಿನ ಮುಳ್ಳಿಕಟ್ಟೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಕುರುಚಲು ಹುಲ್ಲು ಸಾಗಿಸುತ್ತಿದ್ದ ಛತ್ತೀಸ್ ಗಡ ಮೂಲದ ನೋಂದಣಿಯ ಕಂಟೇನರ್ ಚಾಲಕ ವಿಪರೀತವಾಗಿ ಮದ್ಯ ಸೇವಿಸಿ ಕಂಟೇನರ್ ಚಲಾಯಿಸಿದ ಪರಿಣಾಮ ಮುಳ್ಳಿಕಟ್ಟೆ ಜಂಕ್ಷನ್ ನಲ್ಲಿ ಇತ್ತೀಚೆಗಷ್ಟೇ ಹೊಸದಾಗಿ ಅಳವಡಿಸಲಾಗಿದ್ದ ಬ್ಯಾರಿಕೇಡ್ ಅನ್ನು ಬರೋಬ್ಬರಿ ನಾಲ್ಕು ಕಿ.ಮೀ ದೂರದವರೆಗೂ ಎಳೆದು ತಂದಿದ್ದಾನೆ. ಮುಳ್ಳಿಕಟ್ಟೆಯ ರಿಕ್ಷಾ ಚಾಲಕರು ಕಂಟೇನರ್ ನಿಲ್ಲಿಸುವಂತೆ ಸೂಚನೆ ನೀಡಿದರೂ ಮದ್ಯದ ನಶೆಯಲ್ಲಿದ್ದ ಚಾಲಕ ಎರ್ರಾಬಿರ್ರಿ ವಾಹನ ಚಲಾಯಿಸಿ ಅರಾಟೆ ಸೇತುವೆಯ ತಡೆಗೋಡೆಗೂ ಢಿಕ್ಕಿ ಹೊಡೆದಿದ್ದಾನೆ.

ಮುಂದೆ ಸಂಭವಿಸಬಹುದಾದ ಬಹುದೊಡ್ಡ ಅನಾಹುತವನ್ನು ತಪ್ಪಿಸಲು ಕಾರ್ಯಪ್ರವೃತ್ತರಾದ ರಿಕ್ಷಾ ಚಾಲಕರು ಕೂಡಲೇ ಹೆಮ್ಮಾಡಿ ರಿಕ್ಷಾ ಚಾಲಕರಿಗೆ ಮಾಹಿತಿ ನೀಡಿ ಕಂಟೇನರ್ ಅನ್ನು ಓವರ್ ಟೇಕ್ ಮಾಡಿಕೊಂಡು ಬಂದಿದ್ದು, ಹೆಮ್ಮಾಡಿಯಲ್ಲೂ ಕಂಟೇನರ್ ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದ ಕಾರಣ ಕಂಟೇನರ್ ಮುಂಭಾಗದ ಗ್ಲಾಸ್ ಗೆ ಕಲ್ಲೆಸೆದು ವಾಹನವನ್ನು ತಡೆದಿದ್ದಾರೆ. ಕಂಟೇನರ್ ಕೆಳಗೆ ಸಿಲುಕಿರುವ ಬ್ಯಾರಿಕೇಡ್ ಅನ್ನು ತೆಗೆದು ವಾಹನದಲ್ಲಿದ್ದ ಚಾಲಕನನ್ನು ಕೆಳಗಿಸಿ ಚಾಲಕ ಹಾಗೂ ವಾಹನವನ್ನು ಕುಂದಾಪುರ ಸಂಚಾರಿ ಠಾಣೆಯ ಪೊಲೀಸರಿಗೊಪ್ಪಿಸಿದ್ದಾರೆ. ಸಂಚಾರಿ ಪೊಲೀರು ವಾಹನ ಹಾಗೂ ಚಾಲಕನನ್ನು ಗಂಗೊಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆಯ ಬಳಿಕ ಕಂಟೈನರ್ ಹಿಂದಿನ ಬಾಗಿಲು ತೆಗೆದು ಪರಿಶೀಲನೆ ನಡೆಸಿದಾಗ ಒಳಗೆ ಕುರುಚಲು ಹುಲ್ಲು ಇರುವುದು ಬೆಳಕಿಗೆ ಬಂದಿದೆ. ಕುರುಚಲು ಹುಲ್ಲು ಮಾತ್ರವಲ್ಲದೇ ಒಳಗಡೆ ಗಾಂಜಾ ಇನ್ನಿತರ ಅಮಲು ಪದಾರ್ಥಗಳಿರುವ ಇರುವ ಕುರಿತು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಂಟೇನರ್ ಚಾಲಕ ಮದ್ಯ ಮಾತ್ರವಲ್ಲದೇ ಗಾಂಜಾ ಸೇವಿಸಿರುವ ಕುರಿತೂ ಶಂಕೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಗಂಗೊಳ್ಳಿ ಪೊಲೀಸರಿಗೆ ಪ್ರಕರಣವನ್ನು ಹಸ್ತಾಂತರಿಸಿದ್ದು ಠಾಣಾಧಿಕಾರಿ ನಂಜಾ ನಾಯ್ಕ್ ಹಾಗೂ ಸಿಬ್ಬಂದಿಗಳು ತನಿಖೆ ಆರಂಭಿಸಿದ್ದಾರೆ. ಈತನ್ಮಧ್ಯೆ ಸಾರ್ವಜನಿಕರು ಪಾದಾಚಾರಿಗಳು, ವಾಹನ ಸವಾರರಿಗೆ ಏನೂ ತಂದರೆಗಳಾಗದಂತೆ ಎಚ್ಚರ ವಹಿಸಿದ ಮುಳ್ಳಿಕಟ್ಟೆ ರಿಕ್ಷಾ ಚಾಲಕರು ಹಾಗೂ ಹೆಮ್ಮಾಡಿ ರಿಕ್ಷಾ ಚಾಲಕರ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

 

 

Related Posts

Leave a Reply

Your email address will not be published.