‘ಇಂಡಿಯಾ ಟುಡೇ’ ನಿಯತಕಾಲಿಕೆ ರಾಷ್ಟ್ರೀಯ ಸಮೀಕ್ಷೆ : ಉಜಿರೆಯ ಎಸ್.ಡಿ.ಎಂ ಕಾಲೇಜಿಗೆ ವಿಶೇಷ ಮನ್ನಣೆ

ಉಜಿರೆ : ರಾಷ್ಟ್ರ ಮಟ್ಟದ ಪ್ರಸಿದ್ಧ ‘ಇಂಡಿಯಾ ಟುಡೇ’ ನಿಯತಕಾಲಿಕೆಯು ಶೈಕ್ಷಣಿಕ ಕೋರ್ಸ್‍ಗಳ ನಿರ್ವಹಣಾ ಸಾಧನೆಯ ಅಂಶಗಳನ್ನು ಪರಿಗಣಿಸಿ ಇತ್ತೀಚೆಗೆ ನಡೆಸಿದ ರಾಷ್ಟ್ರೀಯ ಅತ್ಯುತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ಉಜಿರೆಯ ಎಸ್.ಡಿ.ಎಂ ಕಾಲೇಜು ದೇಶದ ಪ್ರತಿóಷ್ಠಿತ ನೂರು ಕಾಲೇಜುಗಳ ಪಟ್ಟಿಯಲ್ಲಿ ಉನ್ನತ ಶ್ರೇಯಾಂಕ ಪಡೆದು ಮನ್ನಣೆ ಗಳಿಸಿದೆ.ರಾಷ್ಟ್ರದ ಪದವಿ ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿನ ವಿವಿಧ ಕೋರ್ಸ್‍ಗಳ ನಿರ್ವಹಣೆ ಮತ್ತು ಸಾಧನೆಯನ್ನು ಮೌಲ್ಯಮಾಪನ ಮಾಡಲು ‘ಇಂಡಿಯಾ ಟುಡೇ’ ನಿಯತಕಾಲಿಕವು ಈ ಸಮೀಕ್ಷೆಯನ್ನು ನಡೆಸಿತ್ತು. ಜುಲೈ 05, 2021ರ ವಿಶೇಷ ಸಂಚಿಕೆಯಲ್ಲಿ ಈ ಕುರಿತ ಸಮಗ್ರ ಮಾಹಿತಿಯನ್ನು ಪ್ರಕಟಿಸಿದೆ.

ಕಾಲೇಜಿನ ವಿವಿಧ ವಿಭಾಗಗಳ ಒಟ್ಟು ಕಾರ್ಯಚಟುವಟಿಕೆ ಮತ್ತು ಸಾಧನೆಯನ್ನು ಆಧರಿಸಿ ನೀಡಿದ ಸಮಗ್ರ ರ್‍ಯಾಂಕಿಂಗ್ ಪಟ್ಟಿಯಲ್ಲಿ ಉಜಿರೆ ಕಾಲೇಜಿನ ಬಿ.ಸಿ.ಎ ವಿಭಾಗವು 25ನೇ ರ್‍ಯಾಂಕ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು 25ನೇ ಶ್ರೇಯಾಂಕ, ಸಮಾಜಕಾರ್ಯ ವಿಭಾಗವು 26, ಬಿ.ಬಿ.ಎ. ವಿಭಾಗವು 42, ಕಲಾ ವಿಭಾಗವು 62, ವಿಜ್ಞಾನ ವಿಭಾಗವು 66 ಮತ್ತು ವಾಣಿಜ್ಯಶಾಸ್ತ್ರ ವಿಭಾಗವು 87ನೇ ಶ್ರೇಯಾಂಕದೊಂದಿಗೆ ‘ಟಾಪ್ ಹಂಡ್ರೆಡ್’ ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ
ಕಾಲೇಜಿನ ಬಿ.ಸಿ.ಎ ವಿಭಾಗವು ಅತ್ಯಂತ ಕಡಿಮೆ ಶುಲ್ಕ ನಿಗದಿಗೊಳಿಸಿದ ಕಾಲೇಜುಗಳ ಪಟ್ಟಿಯಲ್ಲಿ 09 ನೇ ರ್‍ಯಾಂಕ್, ಪಡೆದಿದೆ. ಕಳೆದ ಬಾರಿಯ ಇಂಡಿಯಾ ಟುಡೇಯ ಇದೇ ಸಮೀಕ್ಷೆಯಲ್ಲೂ ಉಜಿರೆ ಕಾಲೀಜಿಗೆ ಎಲ್ಲಾ ವಿಭಾಗಗಳಲ್ಲೂ ಪ್ರತಿಷ್ಠಿತ 100 ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಲಭಿಸಿತ್ತು.

ಇಂಡಿಯಾ ಟುಡೇ ಸಂಚಿಕೆಯಲ್ಲಿ ಪ್ರಕಟವಾದ ಮಾಹಿತಿ ಅನ್ವಯ ವೃತ್ತಪರ ಕಾಲೇಜುಗಳು ಸೇರಿದಂತೆ ಅರವತ್ತು ಸಾವಿರ ಕಾಲೇಜುಗಳು ಸಮೀಕ್ಷೆಗೆ ಒಳಪಟ್ಟಿತ್ತು. ಕಾಲೇಜಿಗೆ ಲಭಿಸಿದ ಈ ಮನ್ನಣೆಗೆ ಸಂಸ್ಥೆಯ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆ ಅವರು ಅಭಿನಂದಿಸಿದ್ದಾರೆ, ಸಂಸ್ಥೆಯ ಈ ಶೈಕ್ಷಣಿಕ ಸಾಧನೆ ಗುಣಮಟ್ಟದ ಶಿಕ್ಷಣಕ್ಕೆ ಕೈ ಗನ್ನಡಿ ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಹಾಗೂ ಡಾ. ಬಿ. ಯಶೋವರ್ಮ ಅವರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಸತೀಶ್ಚಂದ್ರ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published.