ಉಚಿತವಾಗಿ ಲಸಿಕೆ ನೀಡುವ ಯೋಜನೆ ರೂಪಿಸುವಂತೆ ದ.ಕ. ಜಿಲ್ಲಾಧಿಕಾರಿಯವರಿಗೆ ಮನವಿ

ಕೊವಿಡ್ ಲಸಿಕೆಯ ಕುರಿತಂತೆ ಎಷ್ಟೇ ತಾರ್ಕಿಕ ಚರ್ಚೆಗಳು ನಡೆಯುತ್ತಿದ್ದರೂ, ಕೊರೊನ ಸೋಂಕು ಹರಡದಂತೆ ತಡೆಯುವ ಸದ್ಯಕ್ಕಿರುವ ಏಕೈಕ ಉಪಾಯ ಲಭ್ಯವಿರುವ ಲಸಿಕೆಯನ್ನು ಹಾಕಿಸಿಕೊಳ್ಳುವುದೆಂಬುದು ಎಲ್ಲ ತಜ್ಞರ ಒಮ್ಮತದ ಸಲಹೆಯಾಗಿದೆ. ಆದ್ದರಿಂದಲೇ ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರಗಳೂ ವ್ಯಾಕ್ಸಿನೇಸನ್ ಅಭಿಯಾನವನ್ನ ಸಮರೋಪಾದಿಯಲ್ಲಿ ನಡೆಸುತ್ತಿವೆ. ಎಲ್ಲ ದೇಶಗಳೂ ಉಚಿತ ವ್ಯಾಕ್ಸಿನೇಸನ್ ಮಾಡುತ್ತಿದ್ದು, ನಮ್ಮ ದೇಶದಲ್ಲೂ ಉಚಿತ ಲಸಿಕೆ ಎಲ್ಲರಿಗೂ ಸಿಗಬೇಕೆಂಬುದು ಜನರ ಒಕ್ಕೊರಳ ಬೇಡಿಕೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ 90 ಶೇಕಡಾಕ್ಕಿಂತಲೂ ಅಧಿಕ ಜನರಿಗೆ ಇನ್ನೂ ಲಸಿಕೆ ನೀಡಲಾಗಿಲ್ಲ. ಜನರ ಜೀವ ಮತ್ತು ಜೀವನೋಪಾಯ ಎರಡೂ ಅಪಾಯದಲ್ಲಿದೆ. ಕಳೆದ ವರ್ಷದ ಲಾಕ್‍ಡೌನ್‍ನಿಂದಾಗಿರುವ ಆರ್ಥಿಕ ಸಂಕಷ್ಟದಿಂದ ಚೇತರಿಸಿ ಕೊಳ್ಳುತ್ತಿರುವಾಗಲೇ ಈ ವರ್ಷವೂ ಮುಂದುವರಿಯುತ್ತಿರುವ ಲಾಕ್‍ಡೌನ್‍ಗಳು ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.

ಸರಕಾರಿ ಆಸ್ಪತ್ರೆಗಳಿಗೆ ಕಡಿಮೆ ಸಂಖ್ಯೆಯಲ್ಲಿ ಲಸಿಕೆ ಪೂರೈಕೆಯಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಿಗೆ ಧಾರಾಳವಾಗಿ ಲಸಿಕೆ ಲಭ್ಯವಾಗುತ್ತಿದೆ. ವಿವಿಧ ಖಾಸಗಿ ಆಸ್ಪತ್ರೆಗಳ ಲಸಿಕಾ ದರಗಳಲ್ಲೂ ವ್ಯತ್ಯಾಸಗಳಿವೆ. ಜಿಲ್ಲೆಗೆ ಪೂರೈಕೆಯಾಗುತ್ತಿರುವ ಒಟ್ಟು ಲಸಿಕೆಗಳ ಲೆಕ್ಕಾಚಾರಗಳನ್ನು ಜಿಲ್ಲಾಡಳಿತ ಬಹಿರಂಗಪಡಿಸುತ್ತಿಲ್ಲ. ಕೆಲವು ಸರಕಾರಿ ಆಸ್ಪತ್ರೆಗಳ ಮುಂದೆ ಬೆಳಿಗ್ಗೆ 5 ಗಂಟೆಯಿಂದ ಹಿರಿಯ ನಾಗರಿಕರು ಸರದಿಯ ಸಾಲಲ್ಲಿ ನಿಂತರೂ ಲಸಿಕೆ ಸಿಗದೆ ಹಿಂತಿರುಗುತ್ತಿರುವುದು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಯುವಕರು ಲಸಿಕೆ ಹಾಕಿಸಿಕೊಳ್ಳುತ್ತಿರುವುದು ಆರ್ಥಿಕ ಸಂಕಷ್ಟದಲ್ಲಿರುವ ಜನರನ್ನು ಅಣಕಿಸುತ್ತಿದೆ.

ಇವೆಲ್ಲವೂ ಸರಕಾರೀ ಲಸಿಕೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆಯೆಂಬ ಆರೋಪ, ಗೊಂದಲಗಳಿಗೂ ಕಾರಣ ವಾಗುತ್ತಿದೆ. ಮಾತ್ರವಲ್ಲ, ಭಯದಿಂದಲೇ ದಿನದೂಡುತ್ತಿರುವ ಜಿಲ್ಲೆಯ ಬಹುತೇಕ ಜನರ, ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿರುವವರ ಆತಂಕಗಳನ್ನು ಇಮ್ಮಡಿಗೊಳಿಸುತ್ತಿವೆ.

ಸರಕಾರದಿಂದ ಜಿಲ್ಲೆಯ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ಸಿಗಲು ಸಾಧ್ಯವೇ ಇಲ್ಲ ಎಂದಾದರೆ, ಜಿಲ್ಲಾಡಳಿತ ಖರೀದಿಗೆ ಮುಂದಾಗಬಹುದು. ಕೇಂದ್ರ ಸರಕಾರದಿಂದ ನೇರವಾಗಿ ಲಸಿಕೆ ಖರೀದಿಸಿದರೆ ಪ್ರತಿ ಲಸಿಕೆಗೆ ರೂ.150 ರಂತೆ 10ಲಕ್ಷ ಡೋಸ್‍ಗೆ ಬೇಕಾಗಿರುವುದು ರೂ.15ಕೋಟಿ. ತಾವು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಜಿಲ್ಲೆಯ ಜನರಿಗೆ ಉಚಿತ ಲಸಿಕೆ ನೀಡುವ ಯೋಜನೆಯನ್ನು ರೂಪಿಸಿದಲ್ಲಿ ಜಿಲ್ಲೆಯ ಸಂಸದರು ಮತ್ತು ಶಾಸಕರ ಅನುದಾನವನ್ನು ನೀಡಬಹುದು ಹಾಗೂ ದೇಶ ವಿದೇಶಗಳಲ್ಲಿರುವ ಜಿಲ್ಲೆಯ ಉದ್ಯಮಿಗಳು ಮತ್ತು ಕೊರೊನ ಕಾಲದ ಸಿಪಾಯಿಗಳಾಗಿ ಕೆಲಸ ಮಾಡುತ್ತಿರುವ ಎನ್‍ಜಿಒಗಳು ತಮ್ಮೊಂದಿಗೆ ಖಂಡಿತ ಕೈಜೋಡಿಸಬಹುದು.

ಎಲ್ಲರಿಗೂ ಲಸಿಕೆ ನೀಡುವುದರ ಮೂಲಕ ಮಾತ್ರ ಕೊರೊನ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ. ಆದುದರಿಂದ ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಯನ್ನು ನಿಲ್ಲಿಸಿ, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜಿಲ್ಲಾಡಳಿತದ ವತಿಯಿಂದ ಆದ್ಯತೆಯ ಮೇರೆಗೆ ಎಲ್ಲರಿಗೂ ಉಚಿತವಾಗಿ ಲಸಿಕೆ ಸಿಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಜನಸಹಾಯ – ಕರ್ನಾಟಕ ಕೋವಿಡ್ ವಾಲೆಂಟಿಯರ್ಸ್ ಟೀಂ ದ.ಕ. ಜಿಲ್ಲಾ ಸಂಚಾಲಕ ಉಮರ್ ಯು.ಹೆಚ್. ಈ ಮೂಲಕ ವಿನಂತಿಸಿದ್ದಾರೆ.

Related Posts

Leave a Reply

Your email address will not be published.