ಉದಯ್ ಕುಟುಂಬಕ್ಕೆ ನ್ಯಾಯ ಕೊಡಿಸಿ: ಕೆ. ಗೋಪಾಲ ಪೂಜಾರಿ

ಕುಂದಾಪುರ: ಅನ್ಯಾಯಗಳ ವಿರುದ್ದ ಧ್ವನಿ ಎತ್ತುತ್ತಿದ್ದ ಉದಯ್ ಗಾಣಿಗ ಅವರನ್ನು ಕಳೆದ ಕೆಲ ದಿನಗಳಿಂದ ಹೊಂಚು ನಡೆಸಿ ಭೀಕರವಾಗಿ ಕೊಲೆಗೈಯ್ಯಲಾಗಿದೆ. ಉದಯ್ ಕೊಲೆಯಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆಯಾಗಬೇಕು. ಅವರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಹೇಳಿದರು.

ಅವರು ಹೆಮ್ಮಾಡಿ ಸಮೀಪದ ಕಟ್‌ಬೇಲ್ತೂರು ನಿವಾಸದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊಳವೆ ಬಾವಿಗೆ ಎನ್‌ಓಸಿ ಕೊಡಲು ನಿರಾಕರಿಸಲಾಗಿದೆ. ಅಲ್ಲದೇ ಉದಯ್ ತಂದೆ ಹೆಸರಲ್ಲಿ ನಕಲಿ ಅರ್ಜಿಯನ್ನು ಸೃಷ್ಠಿ ಮಾಡಿದ್ದಾರೆ. ತಂದೆ ಅರ್ಜಿ ಹಾಕಿಲ್ಲವೆಂದು ಸ್ವತಃ ಪಂಚಾಯತ್‌ಗೆ ಹೋಗಿ ತಿಳಿಸಿದರೂ ಕೂಡ ಉದ್ದಟತನದ ಮಾತುಗಳನ್ನಾಡಿ ಸತಾಯಿಸಿ ಕೊನೆಗೂ ಎನ್‌ಓಸಿ ಕೊಟ್ಟಿದ್ದಾರೆ. ಪಂಚಾಯತ್ ಇರುವುದು ಜನಸಾಮಾನ್ಯರಿಗೆ ಸಹಾಯ ಮಾಡಲು. ದಬ್ಬಾಳಿಕೆ ನಡೆಸಲು ಯಾವ ಜನಪ್ರತಿನಿಧಿಗಳಿಗೂ ಹಕ್ಕಿಲ್ಲ. ಟಾಸ್ಕ್ ಫೋರ್ಸ್ ಹೆಸರಲ್ಲಿ ಬಿಜೆಪಿ ಮುಖಂಡರು ಆಯಾ ಪ್ರದೇಶಗಳಲ್ಲಿ ದೊಣ್ಣೆ ಹಿಡಿದು ನಿಂತುಕೊಂಡು ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಉದಯ್ ಗಾಣಿಗರ ಹತ್ಯೆಗೂ ಇದು ಕಾರಣವಾಗಿದೆ. ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸಬಾರದು ಎಂದು ಸ್ಪಷ್ಟ ಆದೇಶವಿದ್ದರೂ ಕೂಡ ಅವರನ್ನು ಅಂಗಡಿಗೆ ಹೋಗಲು ಬಿಡದೆ ದಬ್ಬಾಳಿಕೆ ನಡೆಸಿ ಜಗಳ ಮಾಡಿ ವಾಪಾಸ್ ಕಳುಹಿಸಿದ್ದಾರೆ. ಟಾಸ್ಕ್ ಫೋರ್ಸ್ ಹೆಸರಲ್ಲಿ ದಬ್ಬಾಳಿಕೆಯಾಗುತ್ತಿದೆ ಎಂದು ಸ್ವತಃ ಜಿಲ್ಲಾಧಿಕಾರಿಯವರ ಬಳಿ ಹೋಗಿ ನಾನು, ಪಕ್ಷದ ನಾಯಕರು ಮನವಿ ಕೊಟ್ಟಿದ್ದೇವೆ. ಓರ್ವ ಪ್ರಾಮಾಣಿಕ ಸಮಾಜಸೇವೆ ಮಾಡಿಕೊಂಡಂತಹ ವ್ಯಕ್ತಿ, ಕೃಷಿ ಕೇಂದ್ರದಲ್ಲಿ ಕೃಷಿಕರಿಗೆ ಉಪಯುಕ್ತವಾದ ಮಾಹಿತಿಗಳನ್ನು ನೀಡುತ್ತಿದ್ದ ಉದಯ್ ಗಾಣಿಗರ ಹತ್ಯೆ ನಡೆಸಿರುವ ಕೊಲೆಗಾರರಿಗೆ ಅವರ ಪತ್ನಿ ಮಕ್ಕಳ ನೆನಪಾಗಿಲ್ಲವೇ? ಉದಯ್ ಮನೆಯವರ ಗೋಳು ಕಣ್ಣಾರೆ ಕಂಡಿದ್ದೇನೆ. ಮನೆಗೆ ಆಧಾರಸ್ಥಂಭವಾಗಿದ್ದ ಮಗನನ್ನು ಕಳೆದುಕೊಂಡ ಅವರ ಕುಟುಂಬ ಕಣ್ಣೀರು ಹಾಕುತ್ತಿದೆ. ಅವರ ಕುಟುಂಬಕ್ಕೆ ಸರ್ಕಾರ ಮುಂದೆ ಬಂದು ಸಹಾಯ ಮಾಡಿ ಪರಿಹಾರ ಘೋಷಿಸಬೇಕು ಎಂದರು.

ಗ್ರಾ.ಪಂ. ಅಧ್ಯಕ್ಷರೇ ಕೊಲೆ ಮಾಡಿರುವುದು ಅಕ್ಷಮ್ಯ. ಇದು ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತಿದೆ. ಅನ್ಯಾಯಗಳನ್ನು ಪ್ರಶ್ನಿಸಿದವನನ್ನು ಕೊಲೆಗೈಯ್ಯತ್ತಾರೆ ಎಂದಾದರೆ ಇವರ ಮನಸ್ಥಿತಿ ಎಂತದ್ದಿರಬಹುದು. ಪಂಚಾಯತ್ ಪ್ರಥಮ ಪ್ರಜೆಯ ಹುದ್ದೆಯಲ್ಲಿ ಕೂರಲು ಇವರು ನಾಲಾಯಕ್ಕು. ಕೂಡಲೇ ನೈತಿಕ ಹೊಣೆ ಹೊತ್ತು ಆ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದರು.ಯಡಮೊಗೆ ಕೊಲೆ ಪ್ರಕರಣದಲ್ಲಿ ಪ್ರಭಾವಿಗಳು ಭಾಗಿಯಾಗಿರುವ ಶಂಕೆಯಿದ್ದು, ಪ್ರಕರಣವನ್ನು ಮುಚ್ಚಿ ಹಾಕುವ ಯತ್ನಗಳು ಸಹ ನಡೆದಿತ್ತು. ಆದರೆ ಈ ಬಗ್ಗೆ ಎಸ್ಪಿಯವರೊಂದಿಗೆ ಶನಿವಾರವೇ ಮಾತನಾಡಿದ್ದು, ಸೂಕ್ತ ಕಾನೂನು ರೀತಿಯ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಪೊಲೀಸ್ ಇಲಾಖೆ ಬಗ್ಗೆ ವಿಶ್ವಾಸವಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಪ್ರಸನ್ನ ಕುಮಾರ್ ಕೆರಾಡಿ, ಶರತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.