ಉದಯ್ ಗಾಣಿಗ ಕೊಲೆ ಪ್ರಕರಣದಲ್ಲಿ ನನ್ನ ಧ್ವನಿ ಅಡಗಿಸುವ ಬಿಜೆಪಿಯ ಪ್ರಯತ್ನ ಫಲಿಸದು: ಸೊರಕೆ ವಾಗ್ದಾಳಿ

ಕುಂದಾಪುರ: ಉದಯ್ ಗಾಣಿಗ ಕೊಲೆ ಪ್ರಕರಣವನ್ನು ಖಂಡಿಸಿ ನಾನು ಹಲವು ಸಂದರ್ಭಗಳಲ್ಲಿ ಧ್ವನಿ ಎತ್ತಿದ್ದೇನೆ. ಇದನ್ನು ಸಹಿಸದ ಬಿಜೆಪಿ ಮುಖಂಡರು ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ಮಾಡಿದರು. ನಾನು ಪುತ್ತೂರಿನವನು ಹಾಗೂ ಹಿಂದೂ ವಿರೋಧಿ ಎಂದು ಜರಿದರು. ಈ ಜಿಲ್ಲೆಯ ಜನ ನನ್ನನ್ನು ಸಂಸದನಾಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ಇಲ್ಲಿನ ಜನರ ಋಣ ನನ್ನ ಮೇಲಿದೆ. ಈ ಮುಗ್ಧ ಜನರಿಗೆ ಅನ್ಯಾಯಗಳಾದರೆ ನಾನು ಧ್ವನಿ ಎತ್ತುತ್ತಲೇ ಇರುತ್ತೇನೆ. ನನ್ನ ಧ್ವನಿ ಅಡಗಿಸುವ ಬಿಜೆಪಿಗರ ಪ್ರಯತ್ನ ಸಫಲವಾಗದು ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಬಿಜೆಪಿ ಮುಖಂಡರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಅವರು ಯಡಮೊಗೆ ಉದಯ್ ಗಾಣಿಗ ಕೊಲೆ ಪ್ರಕರಣವನ್ನು ಖಂಡಿಸಿ, ಸರ್ಕಾರಗಳ ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆಯ ವಿರುದ್ದ ಸಿದ್ದಾಪುರದಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.ಕುಂದಾಪುರ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಉದಯ್ ಗಾಣಿಗ ಕೊಲೆ ಪ್ರಕರಣವನ್ನು ಹೇಗೆ ಮುಚ್ಚಿ ಹಾಕಬೇಕು ಎನ್ನುವ ಪ್ರಯತ್ನದಲ್ಲಿದ್ದಾರೆ ಬಿಟ್ಟರೆ ಕೊಲೆಯ ಸತ್ಯಾಂಶ ಹೊರಗೆ ಬರಬೇಕು ಎನ್ನುವ ಆಲೋಚನೆ ಇದ್ದಂತೆ ಕಾಣಿಸುತ್ತಿಲ್ಲ. ಸಾಕಷ್ಟು ಒತ್ತಡಗಳಿದ್ದರೂ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಇಲಾಖೆಯ ಬಗ್ಗೆ ನಮಗೆ ಯಾವುದೇ ಆತಂಕವಿಲ್ಲ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಗೃಹ ಸಚಿವರಾಗಿರುವ ಕಾರಣ ಈ ಕೊಲೆ ಪ್ರಕರಣ ತನಿಖೆಯ ದಿಕ್ಕು ತಪ್ಪುವ ಸಾಧ್ಯತೆಗಳಿದ್ದು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಉದಯ್ ಗಾಣಿಗ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತಿದ್ದೇವೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಶಿವಮೊಗ್ಗ ಗಡಿಪ್ರದೇಶದ ಸಿದ್ದಾಪುರದಿಂದ ಈ ಪ್ರತಿಭಟನೆ ಪ್ರಾರಂಭವಾಗಿದೆ. ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಹತ್ತು ಬ್ಲಾಕ್‌ಗಳಲ್ಲೂ, ಮೂವತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲೂ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದರು.


ಉದಯ್ ಗಾಣಿಗ ಕೊಲೆ ಪ್ರಕರಣದ ಸಮಗ್ರ ತನಿಖೆಯಾಗಬೇಕು, ಅವರ ಕುಟುಂಬ ನ್ಯಾಯ ಸಿಗಬೇಕೆಂದು ಕಾಂಗ್ರೆಸ್ ಆರಂಭದಿಂದಲೂ ಪ್ರತಿಭಟನೆಗಳನ್ನು ಮಾಡುತ್ತಾ ಬಂದಿದೆ. ಬಿಜೆಪಿಗರು ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ನಾನಾ ಪ್ರಯತ್ನಗಳನ್ನು ಮಾಡಿದರು. ನಾವು ಹಿಂದೂ ವಿರೋಧಿಗಳು ಎಂದು ಆರೋಪಿಸಿದರು. ಆದರೆ ನಾವು ಕೂಡ ಶ್ರೀರಾಮನ ಭಕ್ತರು. ದಿನ ನಿತ್ಯ ದೇವರಿಗೆ ಕೈ ಮುಗಿದೆ ನಾವು ಮನೆಯಿಂದ ಹೊರಗೆ ಬರುತ್ತೇವೆ. ಶ್ರೀರಾಮ ಮರ್ಯಾದ ಪುರುಷೋತ್ತಮ. ಈ ಕೊಲೆ ಕೇಸನ್ನು ಮುಚ್ಚಿ ಹಾಕಲು ಬಿಜೆಪಿಗರು ಗುರಾಣಿಯ ರೀತಿಯಲ್ಲಿ ಶ್ರೀರಾಮನನ್ನು ಬಳಸಿಕೊಳ್ಳುತ್ತಿದ್ದಾರೆ. ಕೊಲೆಯಾದ ಮನೆಯವರ ಪರವಾಗಿ ಶ್ರೀರಾಮ ದೇವರಿರುತ್ತಾರಾ ಅಥವಾ ಕೊಲೆಗಡುಕರ ಪರವಾಗಿ ಇರುತ್ತಾರಾ ಎಂದು ನಾವು ಕಾದು ನೋಡುತ್ತೇವೆ ಎಂದರು.

ಬಿಜೆಪಿಯಲ್ಲಿ ಕೊಲೆಗಡುಕರ ಸಂಖ್ಯೆ ಹೆಚ್ಚುತ್ತಿದ್ದು ಯಾವ ರೀತಿಯ ಆಡಳಿತದಲ್ಲಿ ನಾವಿದ್ದೇವೆ ಎಂದು ಪ್ರಶ್ನೆ ಮಾಡಬೇಕಾಗಿದೆ. ಯಡಮೊಗೆಯ ರಾಜಕಾರಣವನ್ನು ಗಮನಿಸಿದರೆ ನಾವು ಪ್ರಜಾಪ್ರಭುತ್ವದಲ್ಲಿದ್ದೇವಾ ಅಥವಾ ಜಮಿನ್ದಾರಿ ಪದ್ದತಿಯಲ್ಲದ್ದೇವಾ ಎಂಬ ಅನುಮಾನ ಕಾಡುತ್ತಿದೆ. ಇಡೀ ಊರಿನ ಜನರನ್ನೇ ಭಯಬೀಳಿಸಿ ಕೊಲೆ ಮಾಡುತ್ತಾರೆ ಎಂದಾದರೆ ಬಿಜೆಪಿ ಆಡಳಿತದಲ್ಲಿ ಬಡವರಿಗೆ ರಕ್ಷಣೆ ಎಲ್ಲಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.ಕೊರೋನಾ ಮಹಾಮಾರಿ ಖಾಯಿಲೆಯನ್ನು ನಿಯಂತ್ರಿಸಲು ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿದೆ. ನಮಗೆ ಆಕ್ಸಿಜ್, ವೆಂಟಿಲೇಟರ್, ಬೆಡ್, ಔಷಧಿ ಸಿಗಬೇಕಿದ್ದರೆ ಕೋರ್ಟ್ ಆದೇಶ ಮಾಡಬೇಕಾ ಎಂದು ಪ್ರಶ್ನಿಸಿದ ಅವರು, ನಿದ್ದೆ ಮಾಡಿರುವ ಸರ್ಕಾರದ ಕಿವಿಹಿಂಡಿ ಜನರ ಪ್ರಾಣ ರಕ್ಷಣೆಗೆ ಮುಂದಾಗಿ ಎಂದು ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದೆ. ಇದಕ್ಕೆ ಸುಪ್ರೀಂ ಕೋರ್ಟ್ ನಾವೆಲ್ಲರೂ ಅಭಿನಂದನೆ ಸಲ್ಲಿಸಬೇಕು ಎಂದರು.ಆಡಳಿತ ಸುಧಾರಣೆಗಾಗಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಸಚಿವ ಸಂಪುಟ ಪುನರಚನೆ ಮಾಡಿಲ್ಲ. ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದ್ದು ತಮ್ಮ ಅಧಿಕಾರವನ್ನು ಗಟ್ಟಿ ಮಾಡಿಕೊಳ್ಳಲು ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಹೀಗಾಗಿ ಉತ್ತರಪ್ರದೇಶಕ್ಕೆ ಅಧಿಕ ಮಂತ್ರಿ ಸ್ಥಾನವನ್ನು ಕೊಡಲಾಗಿದೆ ಎಂದು ದೂರಿದರು.ಪ್ರತಿಭಟನೆಯಲ್ಲಿ ಶಾಸಕ ಕೆ. ಗೋಪಾಲ ಪೂಜಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು ಮುಖಂಡರಾದ ಪ್ರಸನ್ನ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಗುಡಿಬೆಟ್ಟು ಮಾತನಾಡಿದರು.

ವಂಡ್ಸೆ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ, ಮುಖಂಡರಾದ, ಸಂಪಿಗೇಡಿ ಸಂಜೀವ ಶೆಟ್ಟಿ, ವಾಸುದೇವ ಪೈ, ರಮೇಶ್ ಗಾಣಿಗ, ಪ್ರಕಾಶ್ಚಂದ್ರ ಶೆಟ್ಟಿ, ರಾಜು ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ, ಯುವ ಕಾಂಗ್ರೆಸ್‌ನ ಪ್ರಶಾಂತ್ ಪೂಜಾರಿ ಕರ್ಕಿ, ದಿನೇಶ್ ನಾಯ್ಕ್ ಹಳ್ಳಿಹೊಳೆ ಮೊದಲಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Related Posts

Leave a Reply

Your email address will not be published.