ಉದಯ್ ಗಾಣಿಗ ಕೊಲೆ ಪ್ರಕರಣ: ಆರೋಪಿಗಳ ರಕ್ಷಣೆಗೆ ನಿಂತರೆ ನಾವು ಸಹಿಸುವುದಿಲ್ಲ: ವಿನಯಕುಮಾರ್ ಸೊರಕೆ

ಕುಂದಾಪುರ: ಸಾಮಾಜಿಕ ಕಾರ್ಯಕರ್ತ ಯಡಮೊಗೆ ಉದಯ್ ಗಾಣಿಗ ಕೊಲೆ ಆರೋಪಿಗಳಿಗೆ ಕೆಲ ಬಿಜೆಪಿ ಮುಖಂಡರು ರಕ್ಷಣೆ ಕೊಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿದ್ದು, ಅದು ಯಾರೇ ಆಗಿರಲಿ, ಆರೋಪಿಗಳ ರಕ್ಷಣೆಗೆ ನಿಂತರೆ ನಾವು ಸಹಿಸುವುದಿಲ್ಲ. ಮುಂಬರುವ ಅಧಿವೇಶನದಲ್ಲಿ ನಮ್ಮ ಪಕ್ಷದ ಶಾಸಕರು ನ್ಯಾಯಕ್ಕಾಗಿ ಈ ಬಗ್ಗೆ ಧ್ವನಿ ಎತ್ತುತ್ತಾರೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ವಾಗ್ದಾಳಿ ನಡೆಸಿದರು.

ಅವರು ದುಷ್ಕರ್ಮಿಗಳಿಂದ ಹತ್ಯೆಯಾದ ಮೃತ ಯಡಮೊಗೆಯ ಉದಯ್ ಗಾಣಿಗ ಅವರ ಮನೆಗೆ ಮಾಜಿ ಶಾಸಕ ಗೋಪಾಲ ಪೂಜಾರಿಯವರೊಂದಿಗೆ ತೆರಳಿ ಉದಯ್ ಪತ್ನಿ ಹಾಗೂ ಮನೆಯವರಿಗೆ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ಇಂತಹದೊಂದು ದುಷ್ಕೃತ್ಯ ನಡೆಯುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಪ್ರಕರಣ ತನಿಖಾ ಹಂತದಲ್ಲಿದ್ದು, ಈಗಾಗಲೇ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗ ಇನ್ನೂ ಹಲವರನ್ನು ಬಂಧಿಸಿಲ್ಲ ಎನ್ನುವ ಭಾವನೆಗಳು ಸ್ಥಳೀಯರಲ್ಲಿ ಮನೆಮಾಡಿದೆ. ಇದನ್ನು ನಾವು ಇಲಾಖಾ ಮಟ್ಟದಲ್ಲಿ ಒತ್ತಡವನ್ನು ತರುತ್ತೇವೆ. ಸೋಮವಾರ ಜಿಲ್ಲಾ ಕಾಂಗ್ರೆಸ್ ನಿಯೋಗ ಎಸ್‌ಪಿ ಯವರನ್ನು ಭೇಟಿ ಮಾಡಿ ತನಿಖೆ ಎಲ್ಲಿಯ ತನಕ ಹೋಗಿದೆ ಎಂಬ ವಿಚಾರಗಳನ್ನು ತಿಳಿದುಕೊಳ್ಳುತ್ತೇವೆ. ಕೊಲೆ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಇದನ್ನು ಎಸ್‌ಪಿ ಯವರ ಗಮನಕ್ಕೆ ತರುತ್ತೇವೆ. ನಾವು ಎಸ್‌ಪಿ, ಡಿವೈಎಸ್‌ಪಿ ಹಾಗೂ ತನಿಖಾಧಿಕಾರಿಯ ಮೇಲೆ ವಿಶ್ವಾಸವಿಟ್ಟುಕೊಳ್ಳುತ್ತೇವೆ. ಇದೊಂದು ಪೂರ್ವನಿಯೋಜಿತ ಕೃತ್ಯ ಎನ್ನುವುವುದು ಈಗಾಗಲೇ ಜಗಜ್ಜಾಹೀರಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಹೀಗಾದರೆ ಮಾತ್ರ ನಾವು ಮೃತ ಉದಯ್ ಗಾಣಿಗ ಅವರ ಮನೆಗೆ ನ್ಯಾಯ ಒದಗಿಸಿದಂತಾಗುತ್ತದೆ. ಒಂದು ವೇಳೆ ಇದರಲ್ಲಿ ರಾಜಕೀಯ ಹಸ್ತಾಕ್ಷೇಪವಾಗಿ ಆರೋಪಿಗಳನ್ನು ರಕ್ಷಣೆಗೆ ಮುಂದಾದರೆ ನಾವು ಮುಂದಿನ ದಿನಗಳಲ್ಲಿ ಇದೇ ಗ್ರಾಮದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಈ ರೀತಿಯ ಘಟನೆಗಳು ನಡೆದಾಗ ಪರಿಹಾರ ಘೋಷಿಸಿದ್ದೇವೆ. ಸರ್ಕಾರ ಮೃತ ಉದಯ್ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಕೊಕ್ಕರ್ಣೆಯ ಪ್ರವೀಣ್ ಪೂಜಾರಿ, ಕೋಟ ಅವಳಿ ಪ್ರಕರಣದಲ್ಲಿ ಬಿಜೆಪಿ ಮುಖಂಡರೇ ಭಾಗಿಯಾಗಿದ್ದರು. ಆ ವೇಳೆಯಲ್ಲಿ ಬಿಜೆಪಿ ನಾಯಕರು ಏನೂ ಮಾತನಾಡದೆ ಮೌನವಹಿಸಿದ್ದರು. ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಗ್ರಾಮವನ್ನು ಮುನ್ನಡೆಸಬೇಕಿದ್ದ ಪಂಚಾಯತ್ ಪ್ರಥಮ ಪ್ರಜೆ ಕೊಲೆ ಮಾಡುವಂತಹ ದುಷ್ಕೃತ್ಯಕ್ಕೆ ಮುಂದಾದರೆ ಇಂತವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಬಿಜೆಪಿಯ ಜಿಲ್ಲಾಧ್ಯಕ್ಷ ಕೊಲೆಯಲ್ಲಿ ಭಾಗಿಯಾದ ಆರೋಪಿಯನ್ನು ತಮ್ಮ ಫ್ಲ್ಯಾಟ್‌ನಲ್ಲಿ ಇರಿಸಿಕೊಳ್ಳುತ್ತಾರೆಂದರೆ ಇವರಿಗೆ ಏನನ್ನಬೇಕೊ ತಿಳಿಯುತ್ತಿಲ್ಲ. ಉದಯ್ ಗಾಣಿಗ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಾದುದ್ದು ಸಂಸದ ಹಾಗೂ ಶಾಸಕರ ಕರ್ತವ್ಯ. ಮಾನವೀಯತೆಯ ನೆಲೆಯಲ್ಲಾದರೂ ಸಂಸದರು ಬಂದು ಕುಟುಂಬಕ್ಕೆ ಸಾಂತ್ವಾನ ಹೇಳಬೇಕಿತ್ತು. ಆದರೆ ಆ ಕೆಲಸ ಮಾಡದಿರುವುದು ದುರದೃಷ್ಟಕರ ಎಂದರು.

ಹೆಣದ ಮೇಲೆ ರಾಜಕೀಯ ನಡೆಯುವುದಾದರೆ ಶೋಭಾ ಬರ್ತಾರೆ!:
ರಾಜ್ಯದ ಎಲ್ಲೆಡೆ ಸಾವು ಸಂಭವಿಸಿದ ಮರುಕ್ಷಣವೇ ಬಂದು ಸಂಸದೆ ಶೋಭಾ ಪ್ರತಿಕ್ರಿಯಿಸುತ್ತಾರೆ. ಪ್ರವೀಣ್ ಪೂಜಾರಿ, ಕೋಟ ಅವಳಿ ಕೊಲೆ ನಡೆದಾದಗಲೂ ಸಂಸದೆ ಶೋಭಾ ಕರಂದ್ಲಾಜೆ ಬರಲಿಲ್ಲ. ಯಾರು ಸತ್ತಿದ್ದಾರೆ, ಆ ಸಾವಿನಲ್ಲಿ ರಾಜಕೀಯ ಬೇಳೆ ಬೇಯುವುದಿದ್ದರೆ ಮಾತ್ರ ಶೋಭಾ ಬಂದು ತಮ್ಮ ನಾಲಗೆಯನ್ನು ಹರಿಯಬಿಡುತ್ತಾರೆ. ಅವರದ್ದೇ ಪಕ್ಷದ ಕಾರ್ಯಕರ್ತರನ್ನು ಅವರದ್ದೇ ಪಕ್ಷದ ಮುಖಂಡರು ಕೊಲೆ ಮಾಡಿದಾಗ ಶೋಭಾ ಮೌನ ವಹಿಸುತ್ತಾರೆ. ಉದಯ್ ಗಾಣಿಗ ಕುಟುಂಬಕ್ಕೆ ಶೋಭಾ ಕರಂದ್ಲಾಜೆ ಸಾಂತ್ವಾನ ಹೇಳಲು ಬಾರದಿರುವುದು ನಮಗೇನು ವಿಶೇಷ ಅನಿಸುವುದಿಲ್ಲ ಎಂದು ಸೊರಕೆ ವ್ಯಂಗ್ಯವಾಡಿದರು.

ಕೈ ಮುಗಿದು ಬೇಡುವೆ. ನನ್ನ ಮಗನ ಕೊಂದವರಿಗೆ ಶಿಕ್ಷೆ ಕೊಡಿಸಿ ಸರ್: ಚಿಕ್ಕಮ್ಮನ ಕಣ್ಣೀರು
ನನ್ನ ಮಗನ ಕೊಲೆಗೈದವರಲ್ಲಿ ಯಾರಿದ್ದಾರೋ ಅವರೆಲ್ಲರಿಗೂ ಶಿಕ್ಷೆ ಕೊಡಿಸಿ ಸರ್. ಪ್ರಾಣಿಗಳನ್ನು ಕೊಂದ ಹಾಗೆ ನನ್ನ ಮಗನನ್ನು ಕೊಂದು ಹಾಕಿದ್ದಾರೆ. ಅವರೆಲ್ಲಿಗೂ ಕಠಿಣ ಶಿಕ್ಷೆ ಕೊಡಿಸುವ ಮೂಲಕ ನನ್ನ ಮಗನ ಆತ್ಮಕ್ಕೆ ಶಾಂತಿ ಸಿಗುವ ಹಾಗೆ ಮಾಡಿ ಎಂದು ಮೃತ ಉದಯ್ ಚಿಕ್ಕಮ್ಮ ಕೈ ಮುಗಿದು ಕಣ್ಣೀರು ಹಾಕಿದರು. ನಿಮ್ಮ ಮಗನನ್ನು ಕೊಲೆಗೈದ ತಂಡದಲ್ಲಿ ಯಾರಿದ್ದಾರೊ ಅವರೆಲ್ಲರನ್ನೂ ಬಂಧಿಸಲು ನಾವು ಆಗ್ರಹಿಸುತ್ತೇವೆ. ನಾವೆಲ್ಲರೂ ನಿಮ್ಮ ಕುಟುಂಬದ ಜೊತೆ ನಿಲ್ಲುತ್ತೇವೆ. ಈ ಬಗ್ಗೆ ಎಸ್ಪಿಯವರ ಜೊತೆ ಮಾತನಾಡುತ್ತೇನೆ ಎಂದು ಸೊರಕೆ ಸಂತೈಸಿದರು.

ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜಿಲ್ಲೆಯ ಉಸ್ತುವಾರಿಯಾದ ಮಾಜಿ ಸಂಸದ ಧ್ರುವನಾರಾಯಣ್ ಕೂಡ ಈ ಪ್ರಕರಣದ ಕುರಿತು ಫಾಲೋಅಪ್ ನಡೆಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರ ಗಮನಕ್ಕೂ ತರುವೆವು. ಮುಂದಿನ ಅಧಿವೇಶನದಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲೂ ಈ ಬಗ್ಗೆ ಧ್ವನಿ ಎತ್ತುವ ಕೆಲಸವನ್ನು ಮಾಡುತ್ತೇವೆ.

ಮಾಜಿ ಶಾಸಕರ ಗೋಪಾಲ ಪೂಜಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಮುಖಂಡರಾದ ರಮೇಶ್ ಗಾಣಿಗ, ಸಂಜೀವ ಸಂಪಿಗೇಡಿ, ಯುವ ಮುಖಂಡರಾದ ಶೇಖರ್ ಪೂಜಾರಿ, ಪ್ರಶಾಂತ್ ಪೂಜಾರಿ ಕರ್ಕಿ, ದಿನೇಶ್ ನಾಯ್ಕ್ ಹಳ್ಳಿಹೊಳೆ ಮೊದಲಾದವರು ಇದ್ದರು.

Related Posts

Leave a Reply

Your email address will not be published.