ಉಳ್ಳಾಲದಲ್ಲೊಂದು ಸೌಹಾರ್ದ ಕಂಕಣಭಾಗ್ಯ

ಉಳ್ಳಾಲವನ್ನು ‘ಪಾಕಿಸ್ಥಾನ’ಕ್ಕೆ ಹೋಲಿಸಿ ಭಾಷಣ ಮಾಡಿ ನಗೆಪಾಟಲಿಗೀಡಾಗಿದ್ದ ಘಟನೆ ಸಲ್ಪ ಸಮಯದ ಹಿಂದೆ ನಡೆದಿತ್ತು. ಇದೀಗ ಇದೇ ಉಳ್ಳಾಲದಲ್ಲಿ ಭಾನುವಾರ ನಡೆದ ಸೌಹಾರ್ದ ಮದುವೆ ಉಳ್ಳಾಲದ ಮೂಲಕ ಮತ್ತೊಮ್ಮೆ ಸಾಮರಸ್ಯದ ಸಂದೇಶ ರವಾನಿಸಿದೆ.

ದಿವಂಗತ ಕೇಶವ ಕರ್ಕೇರಾ ಅವರ ಪತ್ನಿ ಗೀತಾ ಅವರು ತನ್ನ ಮಗಳು ಕವನ ಅವರೊಂದಿಗೆ ಉಳ್ಳಾಲ ಮಂಚಿಲದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಈ ಮೊದಲು ಈ ಕುಟುಂಬ ಮಂಗಳೂರಿನ ಶಕ್ತಿನಗರದಲ್ಲಿ ವಾಸವಿದ್ದರು. ಕೇಶವ ಕರ್ಕೇರಾ ಅವರ ನಿಧನದ ಬಳಿಕ ಕಳೆದ ಆರು ತಿಂಗಳಿಂದ ಉಳ್ಳಾಲದ ಮಂಚಿಲದಲ್ಲಿ ತಾಯಿ ಮಗಳು ವಾಸವಾಗಿದ್ದರು. ಈ ನಡುವೆ ಅವಿವಾಹಿತೆ ಕವನಳಿಗೆ ಮದುವೆ ಸಂಬಂಧ ಕೂಡಿಬಂದಿತ್ತು. ಜುಲೈ 11 ಮದುವೆಗೆ ದಿನ ನಿಗದಿಯಾಗಿತ್ತು. ಆದರೆ ಇವರಲ್ಲಿ ಆರ್ಥಿಕ ಸಂಪನ್ಮೂಲ ಏನೂ ಇಲ್ಲದ ಕಾರಣ ಅಕ್ಷರಶಃ ಮದುವೆ ನಿಲ್ಲುವ ಹಂತಕ್ಕೆ ತಲುಪಿತ್ತು. ಈ ವಿಷಯವನ್ನರಿತ ಕವನಳಾ ಚಿಕ್ಕಪ್ಪ ಸುರೇಶ್ ಅವರು ತನ್ನ ಆತ್ಮೀಯ ಮಿತ್ರ ಎಂ.ಕೆ. ರಝಾಕ್ ಎಂಬವರೊಂದಿಗೆ ನೋವು ಹಂಚಿಕೊಂಡಿದ್ದರು. ಆನಂತರ ನಡೆದದ್ದೇ ಬೇರೆ. ಕವನಳ ಬಾಳಿಗೆ ಎಂ.ಕೆ. ಮ್ಯಾರೇಜ್ ಫಂಡ್ ಮೂಲಕ ಅಭಯ ಹಸ್ತ ನೀಡುವ ಮೂಲಕ ಮದುವೆ ಸುಸೂತ್ರವಾಗಿ ಭಾನುವಾರ ನಡೆಯಿತು.

ಆರಂಭದಲ್ಲಿ ಎಂ.ಕೆ. ರಝಾಕ್ ಮತ್ತು ಎಂ.ಕೆ. ರಿಯಾಝ್, ಹನೀಫ್ ಅವರು ಗೀತಾ ಅವರ ಮನೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿದುಕೊಳ್ಳುತ್ತಾರೆ. ಕುಟುಂಬ ತೀರಾ ಕಷ್ಟದಲ್ಲಿ ಇರುವುದು ಅರಿವಾಗುತ್ತದೆ , ಕೂಡಲೇ ಮನೆಗೆ ಗ್ಯಾಸ್, ರೇಶನ್ ವ್ಯವಸ್ಥೆ ಮಾಡುತ್ತಾರೆ. ನಂತರ ಮದುವೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಇವರು ಎಂ.ಕೆ. ಮ್ಯಾರೇಜ್ ಫಂಡ್ ಗ್ರೂಪಿನ ಅಧ್ಯಕ್ಷರಾದ ಯು.ಎಚ್. ಅಬ್ದುರ್ರಹ್ಮಾನ್ ಹಾಗೂ ಎಂ.ಕೆ. ಹಂಝ ಅವರೊಂದಿಗೆ ಚರ್ಚಿಸಿ ಮದುವೆ ನೆರವು ನೀಡಲು ಮುಂದಾಗುತ್ತಾರೆ. ಎಂ.ಕೆ. ಗ್ರೂಪ್ ಮ್ಯಾರೇಜ್ ಫಂಡ್ ನಿಂದ ಮದುವೆ ಸಹಾಯಹಸ್ತ ಚಾಚುತ್ತಾರೆ. ಮದುಮಗಳಿಗೆ ಬೇಕಾದ ಚಿನ್ನಾಭರಣವನ್ನು ವ್ಯವಸ್ಥೆ ಮಾಡಿ ಕೊಡುತ್ತಾರೆ.    ಸ್ಥಳೀಯ ಶಾಸಕರಾದ ಯು.ಟಿ. ಖಾದರ್ ಅವರಿಗೂ ವಿಷಯ ತಿಳಿದಾಗ ಅವರು ಕೂಡ ಈ ಕುಟುಂಬಕ್ಕೆ ದೊಡ್ಡ ಮೊತ್ತದ ಧನಸಹಾಯ ಮಾಡಿ ಶುಭ ಹಾರೈಸಿದರು. ಇನ್ನಿತರ ದಾನಿಗಳೂ ತಮ್ಮ ಉದಾರತೆ ತೋರಿದರು.

ಶನಿವಾರ ಕವನಳ ಮೆಹಂದಿ ಕಾರ್ಯಕ್ರಮವು ಎಂ.ಕೆ. ಹಂಝ ಅವರ ಮನೆಯಲ್ಲಿ ಸಡಗರದಿಂದ ನಡೆಯಿತು. ಹಿಂದೂ ಮುಸ್ಲಿಂ ಕುಟುಂಬಗಳು ಜೊತೆಯಾಗಿ ನಿಂತು ಮೆಹಂದಿ ಶಾಸ್ತ್ರವನ್ನು ನೆರವೇರಿಸಿದರು.

ಕವನಳ ವಿವಾಹವು ಭಾನುವಾರ ಕೇರಳದ ಯುವಕ ರಂಜಿತ್ ಅವರ ಜೊತೆಗೆ ತಲಪಾಡಿಯ ದೇವಿನಗರದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕುಟುಂಬಿಕರ ಸಮ್ಮುಖದಲ್ಲಿ ನಡೆಯಿತು. ಮದುವೆ ಸಮಾರಂಭದಲ್ಲಿ ಕೂಡ ಎಂ.ಕೆ. ಕುಟುಂಬದ ರಿಯಾಝ್, ಮುಬಾರಿಶ್, ರಝಾಕ್, ಹನೀಫ್ ಜಿದ್ದಾ ಹಾಗೂ ಯು.ಎಚ್. ಅಬ್ದುರ್ರಹ್ಮಾನ್ ಪಾಲ್ಗೊಂಡು ನವ ದಂಪತಿಗಳಿಗೆ ಶುಭ ಹಾರೈಸಿದರು.

Related Posts

Leave a Reply

Your email address will not be published.