ಉಳ್ಳಾಲ: ಪೊಲೀಸರಿಗೆ ತಲವಾರು ತೋರಿಸಿದ ರೌಡಿಶೀಟರ್

ಉಳ್ಳಾಲ: ವಾರೆಂಟ್ ಆರೋಪಿಯನ್ನು ಹಿಡಿಯಲು ಹೋದ ಉಳ್ಳಾಲ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಗೆ ರೌಡಿಶೀಟರ್ ತಲವಾರು ತೋರಿಸಿ ಪರಾರಿಯಾದ ಘಟನೆ ಉಳ್ಳಾಲದ ಧರ್ಮನಗರದಲ್ಲಿ ನಡೆದಿದೆ.
ಧರ್ಮನಗರ ನಿವಾಸಿ ಮುಕ್ತಾರ್ ಮುಕ್ತಾರ್ ಅಹ್ಮದ್ ಎಂಬಾತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಈತನ ಮೇಲೆ ಹತ್ತಕ್ಕೂ ಹೆಚ್ಚು ಕೇಸುಗಳಿದ್ದು, ಕೋರ್ಟಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಉಳ್ಳಾಲ ಪೊಲೀಸರು ಕೋರ್ಟಿನಿಂದ ವಾರಂಟ್ ಪಡೆದು ಇಂದು ಬೆಳಗ್ಗೆ ಬಂಧಿಸಲು ತೆರಳಿದ್ದರು. ಧರ್ಮನಗರದ ಮನೆಗೆ ತೆರಳಿದ್ದಾಗ ತಲವಾರು ಹಿಡಿದೇ ಹೊರಬಂದ ಮುಕ್ತಾರ್,ಅಲ್ಲಿಂದ ತಲವಾರು ತೋರಿಸುತ್ತಲೇ ಹತ್ತಿರದ ನಿಜಾಮುದ್ದೀನ್ ಎಂಬವನ ಬೈಕಿನಲ್ಲಿ ಪರಾರಿಯಾಗಿದ್ದಾನೆ.ಪೊಲೀಸರು ಬೆನ್ನಟ್ಟಿದ್ದು ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ರಸ್ತೆಯಲ್ಲಿ ಅಡ್ಡಹಾಕಿ ಬೈಕನ್ನು ಹಿಡಿದಿದ್ದಾರೆ. ಆದರೆ, ಇದರ ನಡುವಲ್ಲೇ ಮುಕ್ತಾರ್ ಅಹ್ಮದ್ ಬೈಕಿನಿಂದ ಇಳಿದು ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿದ್ದಾನೆ. ಬೈಕಿನಲ್ಲಿದ್ದ ನಿಜಾಮುದ್ದೀನ್ ಪೊಲೀಸರು ಹಿಂಬಾಲಿಸಿ ಬಂದಿದ್ದನ್ನು ತಿಳಿದು ಎಸ್ಕೇಪ್ ಆಗುವ ಯತ್ನದಲ್ಲಿ ಮುಂದಿನಿಂದ ಬಂದ ವ್ಯಾಗನರ್ ಕಾರಿಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ, ಸಿನಿಮಾ ಮಾದರಿಯಲ್ಲಿ ನಿಜಾಮುದ್ದೀನನನ್ನು ಬಂಧಿಸಿದ್ದಾರೆ. ಈತ ಈ ಹಿಂದೆ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ದಾವೂದ್ ಎಂಬಾತನ ಸಹೋದರನಾಗಿದ್ದಾನೆ. ಆತನ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ಯಾಚರಣೆ ವೇಳೆ ಉಳ್ಳಾಲ ಠಾಣಾ ಸಿಬ್ಬಂದಿ ವಾಸು , ರಂಜಿತ್, ಚಿದಾನಂದ್, ಅಕ್ಬರ್ ಇದ್ದರು.

ಸ್ವಲ್ಪದರಲ್ಲೇ ತಪ್ಪಿದ ಸಿಬ್ಬಂದಿ ವಾಸು !

ಆರೋಪಿ ತಲವಾರು ತೋರಿಸಿ ಬೈಕಿನಲ್ಲಿ ಪರಾರಿಯಾಗುವಷ್ಟರಲ್ಲಿ ಸಿಬ್ಬಂದಿ ವಾಸು ಅಡ್ಡಹೋಗಿದ್ದು, ಆರೋಪಿ ಮುಕ್ತಾರ್ ತಲವಾರು ಬೀಸಲು ಯತ್ನಿಸಿದ್ದನು. ತಕ್ಷಣ ತಪ್ಪಿಸಿಕೊಂಡ ಸಿಬ್ಬಂದಿ ವಾಸು ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ.

 

Related Posts

Leave a Reply

Your email address will not be published.