ಕಟ್ಟಡ ಕಾರ್ಮಿಕರ ಆಹಾರ ಕಿಟ್ ವಿತರಣೆಯಲ್ಲಿ ತಾರತಮ್ಯ: ಕುಂದಾಪುರದಲ್ಲಿ ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ

ಕುಂದಾಪುರ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 20 ಲಕ್ಷ ಆಹಾರ ಕಿಟ್ ಗಳನ್ನು ಖರೀದಿಸಿ ಎಲ್ಲರಿಗೂ ನೀಡದೇ ಬಹುತೇಕ ಅನರ್ಹ ಕಟ್ಟಡ ಕಾರ್ಮಿಕರಿಗೆ ಬೈಂದೂರು ಶಾಸಕರು ವಿತರಿಸುತ್ತಿರುವುದನ್ನು ಖಂಡಿಸಿ ಇಂದು ಕುಂದಾಪುರದಲ್ಲಿ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಶಾಸಕರು ಹಂಚುತ್ತಿರುವ ಆಹಾರ ಕಿಟ್ ಗಳನ್ನು ಗ್ರಾಮಪಂಚಾಯತ್ ನ ವ್ಯಾಪ್ತಿಯಲ್ಲಿರುವ ಎಲ್ಲಾ ನೋಂದಾಯಿತ ಕಾರ್ಮಿಕರಿಗೂ ನೀಡದೇ ತಾರತಮ್ಯ ಮಾಡಲಾಗುತ್ತಿದೆ. ಕಾರ್ಮಿಕ ಇಲಾಖೆಯು ಗ್ರಾಮಪಂಚಾಯತ್ ಗಳಿಗೆ ನೀಡುತ್ತಿರುವ ಬಹುತೇಕ ಹೆಸರುಗಳ ಪಟ್ಟಿಯಲ್ಲಿ ಆನ್ ಲೈನ್ ಗುರುತುಚೀಟಿ ಪಡೆದವರು ಇವರಲ್ಲಿ ಬಹುತೇಕರು ಕಟ್ಟಡ ಕಾರ್ಮಿಕರಲ್ಲ. ಅಂತವರಿಗೆ ಕಾರ್ಮಿಕರ ಆಹಾರ ವಿತರಿಸುತ್ತಿರುವುದು ಖಂಡನೀಯ ಮತ್ತು ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಸಂಶಯವಿದೆ ಎಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.

ಸಿಐಟಿಯುವಿನ ಹಲವು ರೀತಿಯ ಹೋರಾಟದಿಂದ 2006ರಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಯಾಯಿತು. ಅಲ್ಲಿಂದ ಹಲವು ಸರಕಾರಗಳು ಬಂದು ಹೋದವು. ಆದರೆ ಯಾವ ಸರಕಾರಗಳೂ ಕೂಡ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣ ದುರುಪಯೋಗ ಪಡಿಸಿಕೊಂಡಿರಲಿಲ್ಲ. ಆದರೆ ಈಗ ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ಕಲ್ಯಾಣ ಮಂಡಳಿಯನ್ನು ದಂಧೆಯ ಕೇಂದ್ರವನ್ನಾಗಿಸಿಕೊಂಡಿದೆ. ಇದರಲ್ಲಿ ಕಾರ್ಮಿಕ ಸಚಿವರು, ಶಾಸಕರು ಮಂಡಳಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ ಅವರು ಅನ್ಯ ಉದ್ದೇಶಗಳಿಗೆ ಮಂಡಳಿ ಹಣ ಬಳಸಬಾರದೆಂದು ಸುಪ್ರಿಂ ಕೋರ್ಟ್ ನ ಸ್ಪಷ್ಟ ನಿರ್ದೇಶನವಿದ್ದರೂ2021-22 ಸಾಲಿನಲ್ಲಿ 2033 ಕೋಟಿ ಹಣವನ್ನು ಖರ್ಚು ಮಾಡುವ ತೀರ್ಮಾನ ಕೈಗೊಂಡಿದೆ ಎಂದರು.

ಈ ಹಲವು ತೀರ್ಮಾನಗಳಲ್ಲಿ ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರ ನಡೆಯುವ ಖಚಿತ ಸಾಧ್ಯತೆಗಳಿರುವುದರಿಂದ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯಸ್ಥರು, ಸರಕಾರದ ಮುಖ್ಯ ಕಾರ್ಯದರ್ಶಿಗಳು ಮಧ್ಯಪ್ರವೇಶಿಸಿ ನಡೆಯಬಹುದಾದ ಬಾರಿ ಭ್ರಷ್ಟಾಚಾರ ತಡೆಯಬೇಕೆಂದರು.
ಕಲ್ಯಾಣ ಮಂಡಳಿಯ ಈ ತೀರ್ಮಾನಗಳ ವಿರುದ್ದ ರಾಜ್ಯದಲ್ಲಿ1 ಲಕ್ಷ ಪತ್ರ ಚಳುವಳಿ ಹಮ್ಮಿಕೊಳ್ಳಲಾಗಿದ್ದು ಸೆಪ್ಟಂಬರ್ 01 ರಂದು 10 ಸಾವಿರ ಕಟ್ಟಡ ಕಾರ್ಮಿಕರಿಂದ ಮಂಡಳಿ ಮುತ್ತಿಗೆ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಸಿಐಟಿಯು ಸಂಚಾಲಕ ಎಚ್ ನರಸಿಂಹ ಮಾತನಾಡಿ, ಶಾಸನ ಸಭೆಯಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾತನಾಡದವರು ಶಾಸಕರಾಗಿದ್ದಾರೆ. ಶಾಸಕರಿಗೆ ಕಾರ್ಮಿಕರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಸಿಐಟಿಯು ಒತ್ತಾಯ ಮಾಡಿ ನಿರಂತರ ಹೋರಾಟ ಮಾಡಿದ ಬೇಡಿಕೆಯಾಗಿರುವ ಪ್ರತಿಯೊಬ್ಬನ ಖಾತೆಗೆ ರೂ.೧10 ಸಾವಿರ ನೇರ ಜಮೆ ಮಾಡಲು ಶಾಸಕರು ಒತ್ತಾಯಿಸಬೇಕಾಗಿತ್ತು ಬದಲಾಗಿ ಅವರು ಕಡಿಮೆ ಬೆಲೆಯ ಆಹಾರ ಕಿಟ್ ಕೆಲವರಿಗೆ ಮಾತ್ರ ಕೊಡುವ ಔಚಿತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು.

ಈ ವೇಳೆಯಲ್ಲಿ ಸಂಘದ ಅಧ್ಯಕ್ಷರಾದ ದಾಸಭಂಡಾರಿ, ಉಪಾಧ್ಯಕ್ಷರಾದ ಸಂತೋಷ ಹೆಮ್ಮಾಡಿ, ಜಗದೀಶ ಆಚಾರ್ ಹೆಮ್ಮಾಡಿ, ಸುರೇಶ್ ಪೂಜಾರಿ, ಶ್ರೀನಿವಾಸ ಪೂಜಾರಿ, ಅರುಣ್ ಕುಮಾರ್, ಅನಂತಕುಲಾಲ್, ನೀಲಾ, ರೇಣುಕ, ಅಲೆಕ್ಸ್, ಸಿಐಟಿಯು ಜಿಲ್ಲಾ ಮುಖಂಡ ಮಹಾಬಲ ವಡೇರ ಹೋಬಳಿ ಮುಂತಾದವರಿದ್ದರು.

 

Related Posts

Leave a Reply

Your email address will not be published.