ಮಳೆಯಿಂದಾಗಿ ಭತ್ತದ ಕೃಷಿ ನಾಶ

ಮೂಡುಬಿದಿರೆ : ಅರಮನೆಯ 20 ಎಕ್ರೆ ಜಾಗವನ್ನು ಗೇಣಿಗೆ ಪಡೆದುಕೊಂಡು ಭತ್ತವನ್ನು ಬೆಳೆದು ಇನ್ನೇನು ಕಟಾವು ಮಾಡಬೇಕೆನ್ನುವಷ್ಟರಲ್ಲಿ ಜೋರಾಗಿ ಬೀಸಿದ ಮಳೆಯಿಂದಾಗಿ ಗದ್ದೆಯಲ್ಲಿ ನೀರು ನಿಂತು ಭತ್ತವೆಲ್ಲಾ ಕೊಳೆತು ನಾಶವಾಗಿ ರೈತರು ಕಂಗಾಲಾದ ಘಟನೆ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಮಾಂಟ್ರಾಡಿ ಗ್ರಾಮದ ಅರಮನೆ ಬೈಲು ಎಂಬಲ್ಲಿನ ಸ್ಥಳೀಯರಾದ 6 ಜನ ಸೇರಿಕೊಂಡು ಅರಮನೆಗೆ ಸಂಬಂಧಿಸಿದ 20 ಎಕ್ರೆ ಜಾಗವನ್ನು ಗೇಣಿಗೆ ಪಡೆದುಕೊಂಡು ಭತ್ತದ ಕೃಷಿಯನ್ನು ಮಾಡಿದ್ದರು. ಕಳೆದ ಮೂರು ನಾಲ್ಕು ದಿನಗಳ ಹಿಂದೆ ಮಾಂಟ್ರಾಡಿ ಪ್ರದೇಶದಲ್ಲಿ ಭಾರೀ ಮಳೆ ಬೀಸಿದ್ದು ಇದರ ಪರಿಣಾಮವಾಗಿ 14 ಗದ್ದೆಗಳಲ್ಲಿ ಬೆಳೆದ 200 ಕ್ವಿಂಟಾಲ್‍ನಷ್ಟು ಭತ್ತದ ಪೈರು ನೀರಿನಲ್ಲಿ ಮುಳುಗಿ ಗದ್ದೆಯ ಮಣ್ಣಿಗೆ ಅಂಟಿಕೊಂಡು ಕೊಳೆತು ಹೋಗಿದ್ದು, ಅತ್ತ ಯಂತ್ರದ ಮೂಲಕವೂ ಇತ್ತ ಕೂಲಿಯಾಳುಗಳ ಮೂಲಕವೂ ಕಟಾವು ಮಾಡಲಾಗದ ಪರಿಸ್ಥಿತಿಯಲ್ಲಿದೆ.
ಕೃಷಿಕರಾದ ಪ್ರಸನ್ನ ಬಲ್ಲಾಳ್, ಧರ್ಮಣ ಆಚಾರಿ, ಪೂವಪ್ಪ ಪೂಜಾರಿ, ನೀಲೇಶ ಪೂಜಾರಿ, ಭಾಸ್ಕರ್ ಆಚಾರಿ ಮತ್ತು ಸುಂದರ ಪೂಜಾರಿ ಅವರು ಒಂದೊಂದು ಗದ್ದೆಗಳಿಗೆ ಸುಮಾರು 20,000ದಷ್ಟು ಖರ್ಚು ಮಾಡಿ ಭತ್ತದ ಕೃಷಿಯನ್ನು ಮಾಡಿದ್ದು ಇದೀಗ ಮಳೆಯ ಅವಾಂತರದಿಂದಾಗಿ ಬೆಳೆದ ಭತ್ತವು ನಾಶವಾಗಿರುವುದರಿಂದ ಮತ್ತೆ ಅದೇ ಗದ್ದೆಗೆ ಯಂತ್ರವನ್ನು ಬಳಸಿ ಉಳುಮೆ ಮಾಡಲು ಹೊರಟಿದ್ದಾರೆ ಇದರಿಂದಾಗಿ “ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ” ಎಂಬ ಸ್ಥಿತಿಯಂತ್ತಾಗಿದೆ.
ಮಳೆಯಿಂದಾಗಿ ತಾವು ಬೆಳೆದ ಭತ್ತದ ಕೃಷಿ ನಾಶವಾಗಿರುವುದರ ಬಗ್ಗೆ ರೈತರು ಈಗಾಗಲೇ ಪಂಚಾಯತ್‍ನ ಗಮನಕ್ಕೆ ತಂದಿದ್ದು ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

Related Posts

Leave a Reply

Your email address will not be published.