ಕುಂದಾಪುರದಲ್ಲಿ ಬೆಲೆ ಏರಿಕೆ ವಿರೋಧಿಸಿ ಸಿಐಟಿಯುನಿಂದ ಪ್ರತಿಭಟನೆ

ಕುಂದಾಪುರ: ಜನಸಾಮಾನ್ಯರಿಗೆ ಸಂಕಷ್ಟ ತಂದೊಡ್ಡುತ್ತಿರುವ ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಿ ಎಂದು ಹಲವಾರು ಎಡ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದರೂ ಅದನ್ನು ನಿಯಂತ್ರಿಸುವ ಗೋಜಿಗೆ ಕೇಂದ್ರ, ರಾಜ್ಯ ಸರ್ಕಾರ ಹೋಗಿಲ್ಲ. ಇದು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಅರೆ ಫ್ಯಾಸಿಸ್ಟ್ ಸರ್ಕಾರ ಎನ್ನುವುದನ್ನು ಸಾಬೀತುಪಡಿಸಿದೆ. ಬಿಜೆಪಿ ಕೇವಲ ಕೋಮುವಾದಿ ಪಕ್ಷವಲ್ಲ. ಅದು ಬಡ ಜನರನ್ನು ಲೂಟಿ ಮಾಡುವ ಸರ್ಕಾರ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ವಾಗ್ದಾಳಿ ನಡೆಸಿದರು.

ಅವರು ಗುರುವಾರ ಸಂಜೆ ಬೆಲೆ ಏರಿಕೆ ಖಂಡಿಸಿ, ಕಾರ್ಮಿಕರ ಆಹಾರ ಕಿಟ್ ಅವ್ಯವಹಾರದ ತನಿಖೆಗಾಗಿ ಆಗ್ರಹಿಸಿ ಇಲ್ಲಿನ ಮಿನಿ ವಿಧಾನಸೌಧದ ಎದುರು ಸಿಐಟಿಯು ಕುಂದಾಪುರ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ಕೊರೋನಾ ಸಂಕಷ್ಟದ ಕಾಲದಲ್ಲಿ ದೇಶದ ಎಲ್ಲಾ ಸಂಪನ್ಮೂಲಗಳನ್ನು ಕ್ರೂಢೀಕರಿಸಿ ಜನರನ್ನು ಉಳಿಸುವಂತಹ ಕೆಲಸಕ್ಕೆ ಸರ್ಕಾರ ಮುಂದಾಗಬೇಕಿತ್ತು. ಆದರೆ ಇಂತಹ ಸಮಯದಲ್ಲೂ ಜನರ ಮೇಲೆಯೇ ಬೆಲೆ ಏರಿಕೆಯ ಬರೆ ಎಳೆಯುವಂತಹ ಕೃತ್ಯಕ್ಕೆ ಮುಂದಾಗಿರುವುದು ಖಂಡನೀಯ. ದೇಶದ ಜನರಿಗೆ ಲಸಿಕೆಯನ್ನು ಸಮರೋಪಾದಿಯಲ್ಲಿ ಕೊಟ್ಟು ಜನರ ಜೀವ ಉಳಿಸಿ ಎಂದು ಸಿಐಟಿಯು ಮೊದಲಿನಿಂದಲೂ ಒತ್ತಾಯ ಮಾಡುತ್ತಾ ಬಂದಿದೆ. ಇಡೀ ದೇಶದಲ್ಲಿ ಶೇಕಡಾ ಮೂವತ್ತರಷ್ಟು ಮಾತ್ರ ಲಸಿಕೆ ಇದೆ ಎಂದಾದರೆ ಸರ್ಕಾರವೇ ಹೇಳುವಂತೆ ಮುಂದೆ ಬರುವ ಮೂರನೆ ಅಲೆಗೆ ಎಷ್ಟು ಸಾವುಗಳು ಸಂಭವಿಸಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಲಾಕ್‌ಡೌನ್ ಸಂದರ್ಭದಲ್ಲೂ ಮನೆ ಮನೆಗಳಲ್ಲಿ ನಾವು ಪ್ರತಿಭಟಿಸಿ ಸರ್ಕಾರವನ್ನು ಎಚ್ಚರಿಸಿದರೂ ಕೂಡ ಈ ಬೇಜವಾಬ್ದಾರಿ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದರೆ ಸರ್ಕಾರ ಯಾರ ಪರವಾಗಿದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಕೆ ಶಂಕರ್, ತಾಲೂಕು ಸಂಚಾಲಕ ಎಚ್ ನರಸಿಂಹ ಮಾತನಾಡಿದರು.ಉಪ ತಹಸೀಲ್ದಾರ್ ಶಂಕರ್ ಕೆ ಅವರ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ವಿ ನರಸಿಂಹ, ಮುಖಂಡರಾದ ಮಹಾಬಲ ವಡೇರಹೋಬಳಿ ಮೊದಲಾದವರು ಇದ್ದರು.

Related Posts

Leave a Reply

Your email address will not be published.