ಕೆ.ಪಿ.ಎಸ್.ಸಿಯನ್ನು ಸ್ವಚ್ಛಗೊಳಿಸಿ-ಅನರ್ಹ ಅಧ್ಯಕ್ಷರನ್ನು ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ

“ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇನ್ನಿತರ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳಲ್ಲಿ ಅಕ್ರಮ, ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆಯುವುದನ್ನು ತಪ್ಪಿಸಬೇಕು. ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಸಿಗಬೇಕು” ಎಂದು ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಸಿದ್ದಲಿಂಗ ಬಾಗೇವಾಡಿ ಅವರು ಹೇಳಿದರು. ಕೆ.ಪಿ.ಎಸ್.ಸಿ.ಯನ್ನು ಭ್ರಷ್ಟ ಆಢಳಿತಗಾರರಿಂದ ಸ್ವಚ್ಛಗೊಳಿಸಲು ಆಗ್ರಹಿಸಿ ಹಾಗೂ ಅನರ್ಹ ಅಧ್ಯಕ್ಷರನ್ನು ವಜಾಗೊಳಿಸಲು ಆಗ್ರಹಿಸಿ ವಿಜಯಪುರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.


ಮುಂದುವರೆದು ಮಾತನಾಡಿದ ಸಿದ್ದಲಿಂಗ ಬಾಗೇವಾಡಿಯವರು, “ಈಗ ಕೆಪಿಎಸ್‌ಸಿ ಅಧ್ಯಕ್ಷರ ನೇಮಕಾತಿಯಲ್ಲೇ ನಿಯಮ ಉಲ್ಲಂಘನೆ ಆಗಿರುವುದು ಕೆ.ಪಿ.ಎಸ್.ಸಿ. ಯ ಬಗ್ಗೆ ಇದ್ದ ಅಲ್ಪಸ್ವಲ್ಪ ನಂಬಿಕೆಯು ಕುಸಿದುಹೋಗಿದೆ. ಈ ರೀತಿ ನಿಯಮ ಉಲ್ಲಂಘನೆ ಮಾಡಿ ನೇಮಿಸಿರುವುದು ಮತ್ತಷ್ಟು ಅಕ್ರಮಗಳು ನಡೆಯಲು ದಾರಿ ಮಾಡಿಕೊಟ್ಟಾಂತಾಗುತ್ತದೆ. ಈಗಾಗಲೇ 2011ರಲ್ಲಿ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕದಲ್ಲಿ ಆಗಿರುವ ಅಕ್ರಮ, ಎಫ್.ಡಿ.ಸಿ ಮತ್ತು ಎಸ್.ಡಿ.ಸಿ ಪ್ರಶ್ನೆ ಪತ್ರಿಕೆಗಳ ಸೋರಿಕೆ, ಒಂದೇ ಪರೀಕ್ಷಾ ಕೇಂದ್ರದ 70 ಅಭ್ಯರ್ಥಿಗಳ ಆಯ್ಕೆ ಇವೇ ಮುಂತಾದ ಅಕ್ರಮಗಳಿಂದಾಗಿ ಕೆ.ಪಿ.ಎಸ್.ಸಿ ಬಗ್ಗೆ ಜನರಿಗೆ ವಿಶ್ವಾಸವೇ ಇಲ್ಲದಂತಾಗಿದೆ. ಈಗ ಇದೂ ಒಂದು ಸೇರಿಕೊಂಡಿದೆ. ಇದರ ಪರಿಣಾಮವನ್ನು ನಿರುದ್ಯೋಗಿ ಯುವಜನರು ಅನುಭವಿಸಬೇಕಾಗಿದೆ.” ಎಂದರು.

ಉದ್ಯೋಗಾಕಾಂಕ್ಷಿಗಳಾದ ಸೋಮು ಮಡ್ಡಿ, ಶೋಭಾ, ಶರಣಗೌಡ ಬಾಡಗಿ, ರವಿ ಬಿರಾದಾರ, ರವಿ ಹೊಸಮನಿ, ಆದಿತ್ಯ ಬಿರಾದಾರ, ಶೃತಿ, ಲಾಯಪ್ಪ ಸುಣಗಾರ ಮಾತನಾಡಿ “ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಹಗಲು ರಾತ್ರಿ ಅಧ್ಯಯನ ನಡೆಸಿ, ತರಬೇತಿ ಪಡೆದು ಉದ್ಯೋಗ ಪಡೆಯಲು ಹರಸಾಹಸ ಪಡುತ್ತಾರೆ. ಆದರೆ ಕೆಪಿಎಸ್‌ಸಿಯಲ್ಲಿನ ಇಂತಹ ಅಕ್ರಮಗಳಿಂದಾಗಿ ಪ್ರಾಮಾಣಿಕರು ಮತ್ತು ಪ್ರತಿಭಾವಂತರು ನೇಮಕಾತಿಯಿಂದ ವಂಚಿತರಾಗುತ್ತಾರೆ. ಹಾಗಾಗಿ ಕೆ.ಪಿಎಸ್.ಸಿ.ಯನ್ನು ಸ್ವಚ್ಛಗೊಳಿಸಿ ಎಂದು ಈಗ ಆಗ್ರಹಿಸುವಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಸದರಿ ಅಧ್ಯಕ್ಷರ ಮೇಲಿನ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ, ನಿಯಮ ಉಲ್ಲಂಘನೆ ಸಾಬೀತಾದರೆ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕೆಂದು ಮತ್ತು ಕೆಪಿಎಸ್‌ಸಿಯಲ್ಲಿನ ಎಲ್ಲಾ ರೀತಿಯ ಅಕ್ರಮಗಳನ್ನು ತಡೆಗಟ್ಟಬೇಕು” ಎಂದು ಒತ್ತಾಯಿಸಿದರು.ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ನೂರಾರು ಯುವಜನರು ಹೋರಾಟದಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published.