ಕೋವಿಡ್ ನಿಯಂತ್ರಣಕ್ಕೆ ಕೋವಿಡ್ ಕೇರ್ ಸೆಂಟರ್‌ಗೆ ಮಹತ್ವಕೊಡಿ: ಬಿ.ಸಿ. ರೋಡ್‌ನಲ್ಲಿ ಸಚಿವ ಎಸ್. ಅಂಗಾರ

ಬಂಟ್ವಾಳ: ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಹೋಂ ಐಸೋಲೆಶನ್‌ಗಿಂತ ಕೋವಿಡ್ ಕೇರ್ ಸೆಂಟರ್‌ಗೆ ಹೆಚ್ಚಿನ ಮಹತ್ವ ನೀಡಬೇಕು. ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕಲ್ಪಿಸಿರುವ ವ್ಯವಸ್ಥೆಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಿ, ವಿಶ್ವಾಸ ತುಂಬುವ ಕೆಲಸ ಮಾಡಬೇಕು. ಇದರಿಂದಾಗಿ ವೈರಾಣು ಹರಡುವುದನ್ನು ತಪ್ಪಿಸುವುದರ ಜೊತೆಗೆ ರೋಗ ನಿಯಂತ್ರಣವೂ ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ತಿಳಿಸಿದರು.

ಬಿ.ಸಿ.ರೋಡಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರೆದ ಕೋವಿಡ್ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸರಕಾರ ಅಥವಾ ಮೇಲಾಧಿಕಾರಿಗಳು ನೀಡಿದ ಆದೇಶವನ್ನು ಅಧಿಕಾರಿಗಳು ಅನುಷ್ಠಾನಗೊಳಿಸಬೇಕು ಆಗ ಯಾವದೇ ಸಮಸ್ಯೆಗಳು ಬರುವುದಿಲ್ಲ ಎಂದು ತಿಳಿಸಿದರು. ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅಧಿಕಾರಿಗಳಿಗೆ ಸಂಪೂರ್ಣ ಜವಬ್ದಾರಿ ನೀಡಲಾಗಿದೆ. ಆ ಬಳಿಕವೂ ಯಾವುದೇ ವ್ಯವಸ್ಥೆ ಇಲ್ಲ ಎಂದು ಕೈಚೆಲ್ಲಿ ಕುಳಿತರೇ ಅಧಿಕಾರಿಗಳನ್ನೇ ಜವಬ್ದಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಪಟ್ಟ ಕೆಲಸಗಳು ಆರೋಗ್ಯ ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ, ಎಲ್ಲಾ ಇಲಾಖೆಯ ಅಧಿಕಾರಿಗಳು ಕೋವಿಡ್ ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಬೇಕು, ವರ್ಷಪೂರ್ತಿ ಇದೇ ಕೆಲಸವನ್ನು ಮಾಡಿಕೊಂಡಿರಲು ಸಾಧ್ಯವಿಲ್ಲ, ಆದ್ದರಿಂದ ಎಲ್ಲಾ ಅಧಿಕಾರಿಗಳು ಈ ಹಂತದಲ್ಲಿ ಕೋವಿಡ್ ನಿರ್ಮೂಲನೆ ಗೊಳಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ತಹಶೀಲ್ದಾರ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ, ಪುರಸಭೆ, ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು, ಪಿಡಿಓ, ವಿಎ, ಬೀಟ್ ಪೊಲೀಸರು, ಟಾಸ್ಕ್‌ಪೋರ್ಸ್ ಸಮಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯರ್ಕೆಯರು ಜೊತೆಯಾಗಿ ಕೆಲಸ ಮಾಡಬೇಕು. ಕೋವಿಡ್ ಬಾಧಿತ ವ್ಯಕ್ತಿಗಳನ್ನು ಮನೆಗಳಿಂದ ಖಡ್ಡಯಾವಾಗಿ ಕೇರ್ ಸೆಂಟರ್‌ಗಳಿಗೆ ಸ್ಥಳಾಂತರಿಸಬೇಕು, ಅವರು ಅಲ್ಲಿಗೆ ಬರಲು ಒಪ್ಪದಿದ್ದಲ್ಲಿ ಅಂತವರ ಮನೆಯನ್ನು ಕುಟುಂಬ ಸಮೇತರಾಗಿ ಸೀಲ್‌ಡೌನ್ ಮಾಡಿ ನಿಗಾ ಇರಿಸಬೇಕು, ಆಗಲೂ ವಿರೋಧಿಸಿದವರ ವಿರುದ್ದ ನಿರ್ಧಾಕ್ಷಣ್ಯವಾಗಿ ಎಫ್‌ಐರ್ ದಾಖಲಿಸಬೇಕು ಎಂದು ಸೂಚಿಸಿದರು.

ಕೋವಿಡ್ ಕೇರ್ ಸೆಂಟರ್‌ಗಳನ್ನು ಉತ್ತಮಗೊಳಿಸಿ:

ಕೋವಿಡ್ ಕೇರ್ ಸೆಂಟರ್‌ಗಳ ಬಗ್ಗೆ ಜನರಲ್ಲಿ ಭಯವಿದೆ, ಆ ಕಾರಣಕ್ಕಾಗಿ ಜನರು ಅಲ್ಲಿಗೆ ಬರಲು ಕೇಳುತ್ತಿಲ್ಲ. ಆದ್ದರಿಂದ ಅಧಿಕಾರಿಗಳು ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮನವರಿಕೆ ಮಾಡಬೇಕು, ಟಿವಿ, ದಿನಪತ್ರಿಕೆಯಂತಹ ವ್ಯವಸ್ಥೆಗಳನ್ನು ಕಲ್ಪಿಸಬೇಕು, ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗುವ ಪ್ರತಿಯೊಬ್ಬ ರೋಗಿಯ ದಿನಖರ್ಚಿಗಾಗಿ ೨೫೦ ರೂ. ನೀಡಲಾಗುತ್ತದೆ. ಕೇರ್ ಸೆಮಟರ್‌ಗಳ ವ್ಯವಸ್ಥೆಯನ್ನು ಉತ್ತಮಗೊಳಿಸಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಅಧಿಕಾರಿಗಳು ಸ್ಮಾರ್ಟ್ ಆಗಿ ಕೆಲಸ ಮಾಡಬೇಕು, ಕಡಿಮೆ ಕೆಲಸದಲ್ಲಿ ಹೆಚ್ಚು ಫಲಿತಾಂಶ ಪಡೆಯಬೇಕು ಎಂದ ಡಿಸಿ ಬಂಟ್ವಾಳದಲ್ಲಿ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತಿದ್ದು ಕೋವಿಡ್ ನಿರ್ವಹಣೆಯಲ್ಲಿ ಇನ್ನು ಅತ್ಯುತ್ತಮ ಕೆಲಸ ನಿರ್ವಹಿಸಿ ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ಶೂನ್ಯ ಪ್ರಕರಣ ದಾಖಲಿಸಲು ಪ್ರಯತ್ನಿಸಬೇಕು ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಕ್, ಪುರಸಭೆ ಅಧ್ಯಕ್ಷ ಮಹಮ್ಮದ್ ಶರೀಫ್, ಸಹಾಯಕ ಆಯುಕ್ತ ಮದನ್ ಮೋಹನ್ ವೇದಿಕೆಯಲ್ಲಿ ಇದ್ದರು. ತಹಶೀಲ್ದಾರ್ ರಶ್ಮಿ. ಎಸ್.ಆರ್., ಆರೋಗ್ಯ ವೈದ್ಯಾಧಿಕಾರಿ ಡಾ. ದೀಪಾ ಪ್ರಭು, ಡಿವೈಎಸ್ಪಿ ವೆಲೈಂಟೀನ್ ಡಿಸೋಜಾ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ಸಿಡಿಪಿಒ ಗಾಯತ್ರಿ ಕಂಬಳಿ, ಬಿಇಒ ಜ್ಞಾನೇಶ್, ವಿವಿಧ ಇಲಾಖೆಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು.

 

Related Posts

Leave a Reply

Your email address will not be published.