ಕೋವಿಡ್-19 ನಿಯಂತ್ರಿಸಲು ಸಿಎಂ ನೀಡಿದ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಿ:  ಜಿಲ್ಲಾಧಿಕಾರಿ

ಮಂಗಳೂರು: ರಾಜ್ಯದ ಮುಖ್ಯಮಂತ್ರಿಗಳು ನೀಡಿದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹಾಗೂ ಅದರ ಪಾಸಿಟಿವಿಟಿಯನ್ನು ನಿಯಂತ್ರಿಸುವಂತೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈಗಾಗಲೇ ಕೋವಿಡ್ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗುತ್ತಿದೆ, ಆದರೆ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಬೇಕು, ಸೋಂಕು ತಗಲಿರುವವರು ಹೊರಗೆ ಓಡಾಡಿದ್ದಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು, ಒಂದು ವೇಳೆ ಗರ್ಭೀಣಿಯರಾಗಿದ್ದಲ್ಲೀ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು, ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸುವುದರಿಂದ ವಿನಾಯಿತಿ ನೀಡಬೇಕಿದ್ದಲ್ಲೀ ಅದು ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳಿಗೆ ತಿಳಿದಿರಬೇಕು ಎಂದರು.

ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು, ಅಧಿಕಾರಿಗಳು ಈ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ಖಚಿತ ಪಡಿಸಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಸಾವುಗಳು ಸಂಭವಿಸಬಾರದು, ಮನೆಯ ಸುತ್ತಮುತ್ತ ಸೋಂಕಿತರು, ಸಂಪರ್ಕಿತರು ಯಾರಾದರೂ ಓಡಾಡುವುದು ಕಂಡುಬಂದಲ್ಲಿ ವಿಡಿಯೋ ಮಾಡಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು, ಪಾಸಿಟಿವ್ ಪ್ರಕರಣಗಳು ಸಂಖ್ಯೆ ಹೆಚ್ಚುತ್ತಿರುವುದರಿಂದ ತಪಾಸಣೆಯನ್ನು ಮತ್ತಷ್ಟು ಹೆಚ್ಚಿಸಬೇಕು, ಪ್ರತಿ ದಿನ 12 ರಿಂದ 15 ಸಾವಿರ ಕೋವಿಡ್ ಟೆಸ್ಟ್ ಗಳಾಗೇಕು, ಭಾನುವಾರ, ಹಬ್ಬದ ದಿನಗಳಲ್ಲಿಯೂ ಇದಕ್ಕೆ ವಿನಾಯಿತಿ ಇಲ್ಲ ಎಂದು ಹೇಳಿದರು.

ಸೋಂಕು ನಿರ್ವಹಣೆಯಲ್ಲಿ ಯಾವುದೇ ಕೊರತೆಗಳಾಗದಂತೆ ಎಲ್ಲಾ ಅಗತ್ಯತೆಗಳು ಹಾಗೂ ಪರಿಕರಗಳು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರಬೇಕು, ಸೋಂಕಿತರೊಂದಿಗೆ ಸಂಪರ್ಕ ಇದ್ದವರ ಪತ್ತೆ ಕಾರ್ಯ ಮತ್ತಷ್ಟು ಚುರುಕಾಗಬೇಕು, ಅವರ ಸಂಪರ್ಕ ಪತ್ತೆ ಹಚ್ಚಲು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಬಳಸಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು ಸೂಚಿಸಿದರು.

ಕೋವಿಡ್ ನಿರ್ವಹಣಾ ದೃಷ್ಟಿಯಿಂದ ತಾಲೂಕು ಆರೋಗ್ಯಾಧಿಕಾರಿಗಳಿಗೆ ಅಗತ್ಯವಿದ್ದರೆ ಅನುದಾನ ಬಿಡುಗಡೆ ಮಾಡಲಾಗುವುದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮೂಲಕ ಪತ್ರ ಬರೆದು ಅನುದಾನ ಪಡೆಯಬಹುದು, ಅದೇ ರೀತಿ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೂ ಅಗತ್ಯವಿದ್ದಲ್ಲೀ ಹಣ ನೀಡಲಾಗುವುದು, ವಾರಾಂತ್ಯ ಕರ್ಫ್ಯೂ ಅನುಷ್ಠಾನದ ಬಗ್ಗೆ ಅಧಿಕಾರಿಗಳು ಫಿಲ್ಡಿಗಿಳಿದು ಕೆಲಸ ಮಾಡಬೇಕು, ಲ್ಯಾಬ್ ಟೆಕ್ನಿಷಿಯನ್ಸ್ಗಳ ಅಗತ್ಯವಿದ್ದರೆ ಕೂಡಲೇ ನೇಮಕ ಮಾಡಿಕೊಳ್ಳಬೇಕು, ವಾಹನಗಳ ಅಗತ್ಯವಿದ್ದರೆ ಕೂಡಲೇ ಪಡೆದುಕೊಳ್ಳುವಂತೆ ಹಾಗೂ ಆಂಬುಲೆನ್ಸ್ಗಳ ಅಗತ್ಯವಿದ್ದರೆ ಅವುಗಳನ್ನು ಕೂಡಲೇ ಬಾಡಿಗೆಗೆ ಪಡೆಯುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.

ರಿಕ್ರಿಯೆಷನ್ ಕ್ಲಬ್‌ಗಳನ್ನು ಬಂದ್ ಮಾಡಲಾಗಿದೆ, ಬಾರ್ ಹಾಗೂ ಹೋಟೆಲ್‌ಗಳಲ್ಲಿ ಶೇ.50ರ ಅನುಪಾತದಲ್ಲಿ ನಿರ್ವಹಿಸಬೇಕು, ಪರಿಸ್ಥಿತಿಯ ಗಂಭೀರತೆ ಅರಿತು ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಮಾಡಬೇಕು ಎಂದರು.ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಸಭೆಯಲ್ಲಿದ್ದರು.ವಿವಿಧ ತಾಲೂಕುಗಳ ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ  ಭಾಗವಹಿಸಿದ್ದರು

Related Posts

Leave a Reply

Your email address will not be published.