ತೈಲ ಬಾಂಡ್ ಬಗ್ಗೆ ಸುಳ್ಳು ಪ್ರಚಾರದಿಂದ ಸಮಾಜಕ್ಕೆ ತಪ್ಪು ಸಂದೇಶ: ಕಾವು ಹೇಮನಾಥ ಶೆಟ್ಟಿ 

ಪುತ್ತೂರು: ಇಂಧನ ಬೆಲೆ ಏರಿಕೆಯ ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತೈಲ ಬಾಂಡ್ ಬಗ್ಗೆ ಸುಳ್ಳು ಹೇಳಿಕೆಯನ್ನು ಪ್ರಚಾರ ಪಡಿಸಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಾ ಜನರಿಗೆ ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಕೆಪಿಸಿಸಿ ಸಂಯೋಜಕರಾದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಆರೋಪಿಸಿದ್ದಾರೆ.

ಅವರು ಪುತ್ತೂರಿನ ರೋಟರಿ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ನಡೆದ `ಪೆಟ್ರೋಲ್ ಬೆಲೆ ಏರಿಕೆ-ಆಯಿಲ್ ಬಾಂಡ್ ಮಾಧ್ಯಮ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ತೈಲ ಬಾಂಡ್ ಬಗ್ಗೆ ಜನರ ಸಂದೇಹಗಳನ್ನು ನಿವಾರಿಸುವ ನಿಟ್ಟಿನಲ್ಲಿ ಎಲ್ಲಾ ಪೂರಕ ಸೂಕ್ತ ದಾಖಲೆಗಳೊಂದಿಗೆ ಈ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದ ಅವರು ಸ್ವಾತಂತ್ರ್ಯದ ಸಂದರ್ಭದಲ್ಲಿ ಬ್ರಿಟೀಷರು ದೇಶ ಬಿಟ್ಟು ಹೋಗುವಾಗ ನಮ್ಮಲ್ಲಿದ್ದ ಒಟ್ಟು ಆದಾಯ ಕೇವಲ 50ಸಾವಿರ ಕೋಟಿ ರು. ಮಾತ್ರವಾಗಿತ್ತು. ಅಲ್ಲದೆ ಶೇ. 12% ಸಾಕ್ಷರತಾ ಪ್ರಮಾಣವಿತ್ತು. ಅಂದಿನ ಪ್ರಧಾನಿ ನೆಹರೂ ಅವರ ದೂರದೃಷ್ಠಿಯ ಪರಿಣಾಮದಿಂದ ದೇಶದಲ್ಲಿ ಪರಿಣಾಮಕಾರಿ ಬದಲಾವಣೆಗಳಾದವು. ಅಂದಿನ ಸರ್ಕಾರವು ತೈಲ ಉತ್ಪನ್ನಗಳ ಉತ್ಪಾದನಾ ವೆಚ್ಚದಿಂದ ಕಡಿಮೆ ಬೆಲೆಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ನೀಡುತ್ತಿತ್ತು. ಪೆಟ್ರೋಲ್, ಡಿಸೇಲ್, ಸೀಮೆಎಣ್ಣೆ, ಅಡುಗೆ ಅನಿಲಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತಿತ್ತು.

1999ರಲ್ಲಿ ಅಧಿಕಾರಕ್ಕೆ ಬಂದ ವಾಜಪೇಯಿ ಸರ್ಕಾರವು ಈ ನಷ್ಟವನ್ನು ತಪ್ಪಿಸುವ ಸಲುವಾಗಿ ಕಚ್ಚಾ ತೈಲ ಉತ್ಪಾದನಾ ಕಂಪೆನಿಗಳೊAದಿಗೆ `ಆಯಿಲ್ ಬಾಂಡ್’ ಎನ್ನುವ ಒಪ್ಪಂದವನ್ನು ಮಾಡಿಕೊಂಡರು. 2004ರಲ್ಲಿ ಬಂದ ಮನಮೋಹನ್ ಸಿಂಗ್ ಸರ್ಕಾರವು ಅದನ್ನು ಮುಂದುವರಿಸಿಕೊAಡು ಹೋಗಿತ್ತು. ಆದರೆ ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ತೈಲ ಬೆಲೆ ಗರಿಷ್ಟ ಮಟ್ಟದಲ್ಲಿ ಅಂದರೆ 148.99 ಡಾಲರ್ ಆಗಿತ್ತು. ಆಗಲೂ ಪೆಟ್ರೋಲ್ 51ರು.ಗೆ ಮತ್ತು ಡಿಸೇಲ್ 35 ರು.ಗೆ ನೀಡಲಾಗುತ್ತಿತ್ತು. ಪ್ರಸ್ತುತ ಕಚ್ಚಾ ತೈಲದ ಬೆಲೆ 75 ಡಾಲರ್ ಇದೆ. ಆದರೆ ಪೆಟ್ರೋಲ್ ಬೆಲೆ 100 ರು. ದಾಟಿದೆ. ಡಿಸೇಲ್ ಬೆಲೆ 100 ರು. ಸನಿಹದಲ್ಲಿದೆ. ಈ ಬಗ್ಗೆ ಮಾತನಾಡಿದರೆ ದೇಶದ ಅಭಿವೃದ್ಧಿಗಾಗಿ ಸಹಿಸಿಕೊಳ್ಳಬೇಕು ಎನ್ನುತ್ತಾರೆ. ಇದು ಚರ್ಚೆಗೆ ಗ್ರಾಸವಾಗಿದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕಚ್ಚಾತೈಲ ಬೆಲೆ ತೀರಾ ಕುಸಿದಿತ್ತು. ಆದರೂ ಸರ್ಕಾರದಿಂದ ಗ್ರಾಹಕರಿಗೆ ಹತ್ತು ಹಲವು ತೆರಿಗೆಗಳನ್ನು ಹಾಕಿ ಜನರನ್ನು ಹಗಲು ದರೋಡೆ ಮಾಡಲಾಯಿತು.


ಮಾಧ್ಯಮಗಳೂ ಬಿಜೆಪಿ ಸರ್ಕಾರದ ಪ್ರತಿನಿಧಿಗಳು, ನಾಯಕರು ಹೇಳುವ ಸುಳ್ಳು ಶಬ್ದಗಳಿಗೆ 100 ಪಟ್ಟು ಸೇರಿಸಿ ಪ್ರಚಾರ ನೀಡುತ್ತಿವೆ. ಬಿಜೆಪಿಗರನ್ನು ಪ್ರಶ್ನಿಸುವ ಮೂಲಕ ಎಚ್ಚರಿಸಬೇಕಾಗಿದ್ದ ಬಹುತೇಕ ಮಾಧ್ಯಮಗಳು ಆ ಕೆಲಸ ಮಾಡುತ್ತಿಲ್ಲ. ಮಾಧ್ಯಮಗಳು ತಪ್ಪು ದಾರಿ ತೋರಿಸಿದಲ್ಲಿ ಪ್ರಪಂಚವೇ ತಪ್ಪು ದಿಕ್ಕಿಗೆ ಸಾಗುವ ಅಪಾಯವಿದೆ. ಒಳ್ಳೆಯ ಚಿಂತನೆಯ ಮಾಧ್ಯಮಗಳಿಂದ ದೇಶ ಒಳ್ಳೆಯ ದಿಕ್ಕಿಗೆ ಸಾಗಲಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ತಮ್ಮ ಕರ್ತವ್ಯ ಪ್ರಜ್ಞೆಯನ್ನು ಅರಿತು ಕೆಲಸ ಮಾಡಬೇಕಾಗಿದೆ ಎಂದರು.
ರಾಜ್ಯದಲ್ಲಿ 2 ಬಾರಿ ಮುಖ್ಯಮಂತ್ರಿಯಾದ ಕುಮಾರ ಸ್ವಾಮಿ ಅವರೂ ತೈಲ ಬೆಲೆ ವಿಚಾರದಲ್ಲಿ ಹಿಂದಿನ ಯುಪಿಎ ಸರ್ಕಾರ ಮಾಡಿದ ಸಾಲ ತೀರಿಸಿಲ್ಲ ಎಂಬ ಅಜ್ಞಾನದ ಹೇಳಿಕೆ ನೀಡಿದ್ದು, ಪುತ್ತೂರಿನ ವೈದ್ಯರೊಬ್ಬರು ಅಪ್ಪ ಮಾಡಿದ ಸಾಲಕ್ಕೆ ಮಕ್ಕಳು ತೀರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತೈಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿರುವುದು ಜನ ಸಾಮಾನ್ಯರಿಗೆ ತಪ್ಪು ಮಾಹಿತಿ ನೀಡುವ ಅಪರಾಧವಾಗಿದೆ. ಇವರಿಗೆ ಈ ಬಗ್ಗೆ ದಾಖಲೆಗಳು ಬೇಕಾದಲ್ಲಿ ನಾವು ನೀಡಲು ಸಿದ್ದರಿದ್ದೇವೆ ಎಂದರು.
ಮೋದಿ ಸರ್ಕಾರವು 1ಲಕ್ಷದ 34 ಸಾವಿರ ಕೋಟಿ ಬಾಂಡ್‌ಗಳನ್ನು ಮರು ಪಾವತಿಸಿದೆ ಎಂಬುದು ದೊಡ್ಡ ಸುಳ್ಳಾಗಿದೆ. ಅವರು ಪಾವತಿ ಮಾಡಿರುವುದು ಈ ತನಕ ಕೇವಲ 3500 ಕೋಟಿ ರು. ಮಾತ್ರ. 2004ರಿಂದ 2010ರ ತನಕ 17 ಬಾರಿ ತೈಲ ಬಾಂಡ್ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಈತನಕ ಕೇವಲ 6 ಬಾಂಡ್‌ಗಳು ಮಾತ್ರ ಮೆಚ್ಯೂರ್ ಆಗಿದೆ. 2009 ಮತ್ತು 2012ರಲ್ಲಿ ಮೆಚ್ಯೂರ್ ಆದ 4 ಬಾಂಡ್‌ಗಳನ್ನು ಯುಪಿಎ ಸರ್ಕಾರ ಪಾವತಿ ಮಾಡಿದೆ. ಉಳಿದ 2 ಬಾಂಡ್‌ಗಳನ್ನು ಮಾತ್ರ ಬಳಿಕ ಬಂದ ಮೋದಿ ಸರ್ಕಾರ 2015ರಲ್ಲಿ ಪಾವತಿ ಮಾಡಿದೆ. ಉಳಿದ 11 ಬಾಂಡ್‌ಗಳ ಮೊತ್ತ 1 ಲಕ್ಷದ 30 ಸಾವಿರ ಕೋಟಿ ರು. ಮೆಚ್ಯೂರ್ ಆಗಲು ಬಾಕಿಯಿದೆ. ಈಪೈಕಿ 10 ಸಾವಿರ ಕೋಟಿ ರು. ಮೌಲ್ಯದ ಬಾಂಡ್ 2021ರಲ್ಲಿ ಮೆಚ್ಯೂರ್ ಆಗಲಿದೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು 2021-22ರ ಬಜೆಟ್‌ನಲ್ಲಿ ಮಾಡಲಾಗಿದೆ. ಈ ಬಗ್ಗೆ ಜನರು ಸತ್ಯವನ್ನು ಅರಿತುಕೊಳ್ಳುವಂತೆ ಮಾಡುವುದು ಸಾಮಾಜಿಕ ಜವಾಬ್ದಾರಿಯಾಗಿದೆ ಎಂದರು.
2014ರಿAದ 2017ರ ಅವಧಿಯಲ್ಲಿ ಕೇಂದ್ರ ಸರ್ಕಾರ ಒಟ್ಟು 7,49,485 ಕೋಟಿ ಎಕ್ಸೈಸ್  ಟ್ಯಾಕ್ಸ್ ಸಂಗ್ರಹಿಸಿದ್ದು ಮೋದಿ ಸರ್ಕಾರವು ಒಟ್ಟು 43,725 ಕೋಟಿ ರು.ಗಳನ್ನು ತೈಲ ಬಾಂಡ್ ಮರುಪಾವತಿ ಮತ್ತು ಬಡ್ಡಿಗಾಗಿ ವೆಚ್ಚ ಮಾಡಿದೆ. ಕಳೆದ 7 ವರ್ಷಗಳಿಂದ ತೈಲ ಉತ್ಪನ್ನದಲ್ಲಿ 18,70,796ಕೋಟಿ ರು. ತೆರಿಗೆ ಸಂಗ್ರಹಿಸಲಾಗಿದೆ. ತೈಲ ಉತ್ಪನ್ನ ಮತ್ತು ಮಾರಾಟದ ಕಂಪೆನಿಗಳಿAದ 36,17,560 ಕೋಟಿ ರು. ಆದಾಯ ಸಂಗ್ರಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ವೀಣಾ ಪಿ ಭಟ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ, ಪುರಸಭಾ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಮುಖಂಡರಾದ ರವಿಪ್ರಸಾದ್ ಶೆಟ್ಟಿ, ಅನ್ವರ್ ಖಾಸಿಂ, ತಿಲಕ್‌ರಾಜ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.