ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆತ್ಮನಿರ್ಭರತೆಯ ಯಶೋಗಾಥೆ

ಪಕೋಡಾ ಮಾರಿಯೂ ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳಬಹುದು ಎಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ದೇಶದೆಲ್ಲೆಡೆ ಭಾರೀ ಪ್ರತಿಭಟನೆ, ವ್ಯಂಗ್ಯ ಪ್ರದರ್ಶನಗಳು ಕಂಡು ಬಂದಿತ್ತು. ಅದೇ ರೀತಿ ಪ್ರಧಾನಿಯ ಮಾತಿನಲ್ಲಿ ಸತ್ಯಾಂಶವಿದೆ ಎನ್ನುವುದನ್ನು ತೋರಿಸಿಕೊಟ್ಟ ಹಲವು ವಿಚಾರಗಳೂ ದೇಶದ ಜನರ ಗಮನಕ್ಕೂ ಬಂದಿತ್ತು. ಈ ನಡುವೆ ಸ್ವ ಉದ್ಯೋಗದಲ್ಲಿ ತೊಡಗಿಕೊಂಡು ಸ್ವಾವಲಂಭಿಯಾಗಿ ಬದುಕು ಸಾಗಿಸುತ್ತಿರುವ ಸಾವಿರಾರು ಯುವಪಡೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಗುರುತಿಸಲ್ಪಟ್ಟಿವೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗವನ್ನು ಕಳೆದುಕೊಂಡು ಬೀದಿಗೆ ಬಿದ್ದ ಕುಟುಂಬ ಹಾಗೂ ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಅಲೆಯುತ್ತಿರುವ ಯುವ ಜನತೆಗೆ ಹೊಸ ಆಫರ್ ಒಂದನ್ನು ಕೊಟ್ಟಿತ್ತು. ವಿದ್ಯಾವರ್ಧಕ ಸಂಘ ಇಂಥಹ ಯುವ ಜನತೆಗಾಗಿ ವಿವಿಧ ಉದ್ಯೋಗಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಯುವ ಜನತೆಯನ್ನು ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳುವ ಮೂಲಕ ಸ್ವಾವಲಂಭಿಗಳನ್ನಾಗಿ ಮಾಡುವ ಪಣ ತೊಟ್ಟಿತ್ತು. ಜಿಲ್ಲೆಯ 7 ತಾಲೂಕುಗಳಲ್ಲಿ ಸುಮಾರು 20 ಕ್ಕೂ ಮಿಕ್ಕಿದ ಸ್ಥಳಗಳಲ್ಲಿ 4536 ಯುವಕರಿಗೆ ವಿವಿಧ ಉದ್ಯೋಗಗಳಿಗೆ ಸಂಬಂಧಿಸಿದಂತೆ ತರಬೇತಿಯನ್ನು ನೀಡಲಾಗಿತ್ತು.

ಈ ತರಬೇತಿಯಲ್ಲಿ ಆಹಾರೋದ್ಯಮ, ಜೇನು ಸಾಕಾಣಿಕೆ, ಎಂಬ್ರೋಯ್ಡರಿ, ಕಸಿ ಕಟ್ಟುವಿಕೆ ಸೇರಿದಂತೆ 27 ಉದ್ಯಮಗಳ ಕುರಿತು ಮಾಹಿತಿ ನೀಡಲಾಗಿತ್ತು. ಈ ಮಾಹಿತಿಯನ್ನು ಆಯಾ ಉದ್ಯಮದಲ್ಲಿ ತೊಡಗಿಕೊಂಡ ಪರಿಣಿತರಿಂದಲೇ ಕೊಡುವ ಮೂಲಕ ಸ್ವ ಉದ್ಯಮವನ್ನು ಯಾವ ರೀತಿಯಲ್ಲಿ ಆರಂಭಿಸಬಹುದು ಎನ್ನುವುದನ್ನು ಹೇಳಿಕೊಡಲಾಗಿತ್ತು. ಜಿಲ್ಲೆಯ ಹಲವು ಮಹಿಳೆ, ಪುರುಷ, ಯುವಕ,ಯುವತಿ ಸೇರಿದಂತೆ ಎಲ್ಲಾ ವಯೋಮಾನದವರು ಈ ತರಬೇತಿಯ ಲಾಭವನ್ನು ಪಡೆಯುವ ಮೂಲಕ ಇದೀಗ ಸ್ವ ಉದ್ಯಮದಲ್ಲಿ ತೊಡಗಿಕೊಳ್ಳುವ ಮೂಲಕ ಜೀವನದಲ್ಲಿ ಆತ್ಮ ನಿರ್ಭರತೆಯನ್ನು ಪಡೆದುಕೊಂಡಿದ್ದಾರೆ. ಹೆಚ್ಚಿನ ಮಹಿಳೆಯರು ಆಹಾರೋಧ್ಯಮದಲ್ಲಿ ತೊಡಗಿಕೊಂಡರೆ, ಪುರುಷರು ಜೇನು ಸಾಕಾಣಿಕೆ, ಕಸಿ ಕಟ್ಟುವಿಕೆ ಸೇರಿದಂತೆ ಇತರ ಉದ್ಯಮಗಳನ್ನು ಆಯ್ಕೆ ಮಾಡುವ ಮೂಲಕ ಸ್ವಾವಲಂಭಿ ಬದುಕನ್ನು ಆರಂಭಿಸಿದ್ದಾರೆ.

ತರಬೇತಿಯಿಂದ ಉದ್ಯಮಕ್ಕೆ ಬೇಕಾದ ಎಲ್ಲಾ ವಿಷಯಗಳನ್ನೂ ತಿಳಿದುಕೊಳ್ಳುವಂತಾಗಿದೆ. ಆಹಾರೋದ್ಯಮವನ್ನು ಪ್ರಾರಂಭಿಸಬೇಕು ಎನ್ನುವ ಇಚ್ಛೆ ಹಿಂದಿನಿಂದಲೇ ಇದ್ದ ಕಾರಣ ತರಬೇತಿಯಲ್ಲಿ ಆಹಾರೋದ್ಯಮದ ವಿಷಯವನ್ನೇ ಆಯ್ಕೆ ಮಾಡಿಕೊಂಡಿದ್ದೆ ಎನ್ನುತ್ತಾರೆ ಉಜಿರೆಯ ಉದ್ಯಮಿ ಮಹಿಳೆ ಧನ್ಯವತಿ. ಕರಾವಳಿಯ ಸಾಂಪ್ರದಾಯಿಕ ತಿಂಡಿ ತಿನಿಸುಗಳಾದ ಇಡ್ಲಿ, ದೋಸೆ ಹೀಗೆ ವಿವಿಧ ತಿಂಡಿ ತಿನಿಸುಗಳಿಗೆ ಬೇಕಾದ ಅಕ್ಕಿ ಹುಡಿಯನ್ನು ತಯಾರಿಸಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿರುವ ಧನ್ಯವತಿ ಇದೀಗ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು, ಈಕೆಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ.
ಧನ್ಯವತಿಯಂತೆ ಪುತ್ತೂರಿನ ಚೇತನ ಇತ್ತೀಚಿನ ದಿನಗಳವರೆಗೂ ಬೇರೊಂದು ಸಂಸ್ಥೆಯಲ್ಲಿ ಉದ್ಯೋಗಿಯಾಗಿ ದುಡಿಯುತ್ತಿದ್ದವರು. ಉದ್ಯೋಗ ತರಬೇತಿ ಕಾರ್ಯಕ್ರಮಕ್ಕೆ ದುಡಿಯುವ ಸಂಸ್ಥೆಗೆ ಒಂದು ವಾರ ರಜಾ ಹಾಕಿ ಹೋಗಿದ್ದು, ತರಬೇತಿಯಲ್ಲಿ ಬಾಳೆಹಣ್ಣಿನ ಚಿಪ್ಸ್ ತಯಾರಿಸುವುದನ್ನು ಕಲಿತಿದ್ದರು.

ಕೆಲ ದಿನಗಳ ಕಾಲ ಬೆಳಿಗ್ಗೆ ಉದ್ಯೋಗಕ್ಕೆ ಹೋಗಿ ರಾತ್ರಿ ಹೊತ್ತು ಮನೆಯಲ್ಲಿ ಚಿಪ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದ ಚೇತನಾ ಇದೀಗ ಫುಲ್ ಟೈಂ ಚಿಪ್ಸ್ ತಯಾರಿಕೆಯಲ್ಲೇ ತೊಡಗಿಕೊಂಡಿದ್ದಾರೆ. ಹಿಂದೆ ತಯಾರಿಸಿದ ಚಿಪ್ಸ್ ಅನ್ನು ಮಾರಾಟ ಮಾಡಲು ತನ್ನ ವಾಟ್ಸ್ ಅಪ್ ಸ್ಟೇಟಸ್ ಹಾಗೂ ಇತರ ಮೂಲಗಳ ಮೂಲಕ ಮಾರ್ಕೆಟಿಂಗ್ ಮಾಡಬೇಕಾಗಿತ್ತು. ಆದರೆ ಇದೀಗ ಪುತ್ತೂರಿನಲ್ಲಿ ಚಿಪ್ಸ್ ಕಾರ್ನರ್ ಒಂದನ್ನು ಪ್ರಾರಂಭಿಸಿದ್ದು, ಜನ ಅಂಗಡಿ ಬಾಗಿಲು ತೆಗೆಯುವ ಮೊದಲೇ ಚಿಪ್ಸ್ ಗಾಗಿ ಕಾಯುತ್ತಾರೆ ಎನ್ನುತ್ತಾರೆ ಚೇತನ. ದಿನವೊಂದಕ್ಕೆ 20 ಕಿಲೋ ಗಿಂತಲೂ ಚಿಪ್ಸ್ ಮಾರಾಟವಾಗುತ್ತಿದ್ದು, ಇದರಿಂದಾಗಿ ಕುಟುಂಬದ ರಥ ಯಾವುದೇ ತೊಂದರೆಯಿಲ್ಲದೆ ಸಾಗುತ್ತಿದೆ ಎನ್ನುವ ವಿಶ್ವಾಸದ ಮಾತನಾಡುತ್ತಾರೆ.

ಸುಮಾರು 1500 ಕ್ಕೂ ಮಿಕ್ಕಿದ ಯುವ ಪಡೆ ಇದೀಗ ಆತ್ಮನಿಭರತೆಯ ಕಡೆ ಸಾಗಿದ್ದು, ತರಬೇತಿ ಪಡೆದ ಉಳಿದವರೂ ಸದ್ಯದಲ್ಲೇ ಹೊಸ ಉದ್ಯಮ ಆರಂಭಿಸುವ ಹಂತದಲ್ಲಿದ್ದಾರೆ.

Related Posts

Leave a Reply

Your email address will not be published.