ಧಾರ್ಮಿಕ ಅಲ್ಪಸಂಖ್ಯಾತ ಪ್ರಮಾಣ ಪತ್ರದಲ್ಲಿ ಎಡವಟ್ಟು, ಸೂಕ್ತ ತುರ್ತು ಕ್ರಮಕ್ಕಾಗಿ ಮನವಿ

ಧಾರ್ಮಿಕ ಅಲ್ಪಸಂಖ್ಯಾತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಪದವಿ/ಸ್ನಾತಕೋತ್ತರ ಪದವಿಯ ಖಾಸಗಿ ಕೋಟಾದ ಸೀಟುಗಳ ಪ್ರವೇಶ ಬಯಸುವ ವಿದ್ಯಾರ್ಥಿಗಳು‌ ತಾಲೂಕು ತಹಶೀಲ್ದಾರರಿಂದ ನಿಗದಿತ ನಮೂನೆಯಲ್ಲಿ (ಅನುಬಂಧ 4ಎ) ಧಾರ್ಮಿಕ ಅಲ್ಪಸಂಖ್ಯಾತ ಪ್ರಮಾಣಪತ್ರ ಪಡೆದು, ಆನ್‍ಲೈನ್ ಕೌನ್ಸಿಲಿಂಗ್’ನ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಹಾಜರು ಪಡಿಸಬೇಕೆಂಬುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮ.

ಆದರೆ, ನಿಗದಿತ ನಮೂನೆ (ಅನುಬಂಧ 4ಎ)ಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಪ್ರಮಾಣ ಪತ್ರ ನೀಡಲು ಒಪ್ಪದ ಕೆಲವು ತಹಶೀಲ್ದಾರರು ತಮ್ಮದೇ ಮಾದರಿಯ ಕಂಪ್ಯೂಟರೀಕೃತ ಪ್ರಮಾಣ ಪತ್ರ ನೀಡುತ್ತಿದ್ದಾರೆ. ‘ಇದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಂಗೀಕರಿಸಲ್ಲ, ದಯವಿಟ್ಟು ಅನುಬಂಧ 4ಎ ನಮೂನೆಯಲ್ಲಿ ಪ್ರಮಾಣ ಪತ್ರ ನೀಡಿ’ ಎಂಬುದಾಗಿ ವಿದ್ಯಾರ್ಥಿಗಳು ಗೋಳಿಟ್ಟರೆ “ನಮ್ಮಲ್ಲಿರುವುದು ಇದೇ ಮಾದರಿ, ಬೇರೆ ನಮೂನೆಯಲ್ಲಿ ಕೊಡಲು ಆಗಲ್ಲ” ಎಂಬ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಮಂಗಳೂರಿನ ಕರಿಯರ್ ಗೈಡೆನ್ಸ್ ಆಂಡ್ ಇನ್ಫಾರ್ಮೇಶನ್ ಸೆಂಟರ್’ನ ಸ್ಥಾಪಕಾಧ್ಯಕ್ಷ ಉಮರ್ ಯು.ಹೆಚ್. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ದೂರು ನೀಡಿದ್ದಾರೆ.

ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರ ನೀಡುವಂತೆ ಸರಕಾರೀ ಆದೇಶ (MWD 330 MDS 2020 ಬೆಂಗಳೂರು ದಿನಾಂಕ: 13-06-2020)ವಿದ್ದು, ಕಳೆದ ವರ್ಷ ಅನುಬಂಧ 4ಎ ನಮೂನೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿರುವ ತಹಶಿಲ್ದಾರರೇ ಈ ವರ್ಷ ವಿದ್ಯಾರ್ಥಿಗಳನ್ನು ಸತಾಯಿಸುತ್ತಿದ್ದಾರೆ ಎಂದೂ ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ನೀಟ್ ಪರೀಕ್ಷೆ ಬರೆದು, ಆನ್‍ಲೈನ್ ಕೌನ್ಸಿಲಿಂಗ್’ಗೆ ದಾಖಲೆಗಳನ್ನು ಸಿದ್ದಪಡಿಸುತ್ತಿರುವ ವಿದ್ಯಾರ್ಥಿಗಳು ಮತ್ತು ಪಾಲಕರು ಕೆಲವು ತಹಶಿಲ್ದಾರರ ಈ ನಡೆಯಿಂದ ಕಂಗಾಲಾಗಿದ್ದಾರೆ. ಈ ಕುರಿತಂತೆ ಸೂಕ್ತ ತುರ್ತು ಕ್ರಮ ಕೈಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಸಾಂತ್ವನ ನೀಡಿ, ಪ್ರೋತ್ಸಾಹಿಸಬೇಕೆಂದು ಉಮರ್ ಯು.ಹೆಚ್. ವಿನಂತಿಸಿದ್ದಾರೆ.

Related Posts

Leave a Reply

Your email address will not be published.