ನಿಡ್ಡೋಡಿಯ ಪ್ರಸ್ತಾವಿತ ಸೀಫುಡ್ ಪಾರ್ಕ್‌ನಿಂದ ಪರಿಸರ ಮಾಲಿನ್ಯ ಖಂಡಿತ: ಅಭಯಚಂದ್ರ ಜೈನ್

ಮೂಡುಬಿದಿರೆ : ನಿಡ್ಡೋಡಿಯ ಪ್ರಸ್ತಾವಿತ ಸೀಫುಡ್ ಪಾರ್ಕ್‌ನಿಂದ ಪರಿಸರ ಮಾಲಿನ್ಯ ವ್ಯಾಪಕವಾಗಿ ಹರಡಲಿದೆ. ಜಲ ಸಂಪನ್ಮೂಲ ಕಲುಷಿತವಾಗಿ ಕೃಷಿ ಚಟುವಟಿಕೆಗಳಿಗೆ ಮಾರಕವಾಗಿ ಪರಿಣಮಿಸಲಿದೆ. ಇಂಥ ಯೋಜನೆ ನಿಡ್ಡೋಡಿಗೆ ತಕ್ಕುದಾಗಿಲ್ಲ’ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಅಭಿಪ್ರಾಯಪಟ್ಟರು.

ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ನಿಡ್ಡೋಡಿಗೆ ಸೀಫುಡ್ ಪಾರ್ಕ್ ಬೇಕೆಂಬುವವರು ಕಾರವಾರದಲ್ಲಿ ಹಲವಾರು ವರ್ಷಗಳ ಹಿಂದೆ ಸ್ಥಾಪನೆಯಾಗಿ, ಬಳಿಕ ನಡೆಸಲಾಗದೆ, ಗುತ್ತಿಗೆಗೆ ಕೊಟ್ಟು , ಅದೂ ನಡೆಯದೆ ಬಾಗಿಲು ಹಾಕಿಕೊಂಡು ಏಳುವರ್ಷಗಳೇ ಸಂದಿವೆ ಎಂಬುದನ್ನು ನೋಡಿ ಬರಲಿ. ಅದನ್ನು ಇನ್ನೂ ತೆರವು ಮಾಡಿಸಲಾಗಿಲ್ಲ. ಅದೀಗ ಬೂತ ಬಂಗಲೆಯಂತಾಗಿದೆ. ಮೀನುಗಾರಿಕಾ ಸಚಿವನಾಗಿ ಇಂಥ ಪಾರ್ಕ್ ಅಂದರೆ ಎಷ್ಟು ಬೋಗಸ್ ಚಟುವಟಿಕೆಗಳಿಗೆ ಆಸ್ಪದ ಕೊಡುವಂಥದ್ದು ಎಂದು ನನಗೆ ತಿಳಿದಿದೆ’ ಎಂದರು.

ನಿಡ್ಡೋಡಿಯಲ್ಲಿ ಜನರಿಗೆ ಸತ್ಯ ಸಂಗತಿ ತಿಳಿಸದೆ, ಜನರ ಆಕ್ಷೇಪಕ್ಕೆ ಬೆಲೆ ಕೊಡದೆ, ಈ ಯೋಜನೆ ಬರುವುದಾದಲ್ಲಿ ನನ್ನ ತೀವ್ರ ವಿರೋಧವಿದೆ. ಈ ಹಿಂದೆ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ವಿರುದ್ಧ, ಬಾಕ್ಸೈಟ್ ಗಣಿಗಾರಿಕೆಯ ಪ್ರಸ್ತಾವನೆಯ ವಿರುದ್ಧ ಹೋರಾಡಿದ್ದೆ. ವಿಧಾನಪರಿಷತ್ ಸದಸ್ಯನಾಗಿದ್ದಾಗ ಕಡಂದಲೆಯ ಏಂಜೆಲ್ ಹಾರ್ಡ್ ಬಣ್ಣದ ಕಾರ್ಖಾನೆಯ ವಿರುದ್ಧ ನಡೆದ ಹೋರಾಟದಲ್ಲಿ ಈಗ ಸಂಸದರಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡಾ ಪಾಲ್ಗೊಂಡಿದ್ದನ್ನು ಗಮನಿಸಬೇಕು. ಪುತ್ತೂರಿನಿಂದ ಎತ್ತಂಗಡಿ ಮಾಡಲ್ಪಟ್ಟಿರುವ ಈ ಸೀಫುಡ್ ಪಾರ್ಕ್ ನಿಡ್ಡೋಡಿಗೆ ಬರಲು ಹವಣಿಸುತ್ತಿರುವುದು ಖಂಡನೀಯ. ನಿಡ್ಡೋಡಿಯಲ್ಲಿ ಸ್ವಂತ ಹಾಗೂ ಅಕ್ರಮ ಸಕ್ರಮ ಮೂಲಕ ಭೂಮಿ ಪಡೆದುಕೊಂಡವರು ಕಷ್ಟದಿಂದ ತೋಟ, ಕೃಷಿ ಮಾಡಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅವರನ್ನೆಲ್ಲ ಒಕ್ಕಲೆಬ್ಬಿಸುವ ಬೆದರಿಕೆಯ ಮಾತು ನಾಯಕರಿಂದ ಕೇಳಿಬರುತ್ತಾ ಇದೆ. ಹಾಗೊಂದು ವೇಳೆ ಭೂಮಿ ಸೆಳೆದುಕೊಂಡರೆ ಸಂತ್ರಸ್ತರು, ಹೋರಾಟಗಾರರು ಜೈಲಿಗೆ ಹೋಗುವ ಪರಿಸ್ಥಿತಿ ಬರುತ್ತದೆ. ನಾನು ಆಗ ಅವರ ಪರ ನಿಲ್ಲಲೇಬೇಕಾಗುತ್ತದೆ’ ಎಂದು ಅಭಯಚಂದ್ರ ಪ್ರಕಟಿಸಿದರು.

ನಿಡ್ಡೋಡಿಗೆ ಮೆಡಿಕಲ್ ಕಾಲೇಜು, ಪರಿಸರ ಸಹ್ಯ ಉದ್ಯಮ: ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆಂದು ಗುರುತಿಸಿದ್ದ ಭೂಮಿಯಲ್ಲಿ ಸೀಫುಡ್ ಪಾರ್ಕ್ ಸ್ಥಾಪಿಸಲು ಹೊರಟಾಗ ನಡೆದ ಹೋರಾಟದಲ್ಲಿ ಅಲ್ಲಿನವರು ಯಶಸ್ವಿಯಾಗಿದ್ದಾರೆ. ಈಗಲೂ ಕಾಲಮಿಂಚಿಲ್ಲ. ನಿಡ್ಡೋಡಿಯಲ್ಲೂ ಮೆಡಿಕಲ್ ಕಾಲೇಜಾಗಲಿ ಅಥವಾ ಇನ್‌ಫೋಸಿಸ್‌ನಂಥ ಉದ್ಯಮ ಬರಲಿ; ಅಂಥದ್ದು ಬರುವುದಾದರೆ ಸ್ವಾಗತಾರ್ಹ ಎಂದು ಅಭಯಚಂದ್ರ ಹೇಳಿದರು.

Related Posts

Leave a Reply

Your email address will not be published.