ನಿರಪರಾಧಿಯಾಗಿ ಬಿಡುಗಡೆಗೊಂಡು ಕೊನೆಗೂ ಕುಟುಂಬ ಸೇರಿದ ಹರೀಶ್ ಬಂಗೇರ

ಕುಂದಾಪುರ: ಮೆಕ್ಕಾದ ಕುರಿತು ಅವಹೇಳನಕಾರಿ ಬರೆಹ ಪ್ರಕಟಿಸಿದ ಆರೋಪದಡಿ ಸೌದಿ ಅರೇಬಿಯಾದಲ್ಲಿ ಜೈಲುಪಾಲಾಗಿದ್ದ ಬೀಜಾಡಿ ನಿವಾಸಿ ಹರೀಶ್ ಬಂಗೇರ ಕೊನೆಗೂ ಬಿಡುಗಡೆಗೊಂಡು ಗುರುವಾರ ಕುಟುಂಬ ಸಮೇತರಾಗಿ ಆನೆಗುಡ್ಡೆ ಶ್ರೀ ವಿನಾಯಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಜನಸೇವಾ ಟ್ರಸ್ಟ್ ಹಾಗೂ ಟೀಮ್ ಅಭಿಮತ ನೇತೃತ್ವದಲ್ಲಿ ಕೋಟೇಶ್ವರ ದೇವಸ್ಥಾನದವರೆಗೆ ಗುರುವಾರ ಮುಂಜಾನೆ ಕಾಲ್ನಡಿಗೆಯಲ್ಲಿ ಸಾಗಿ ಅಲ್ಲಿಯೂ ಪೂಜೆ ಸಲ್ಲಿಸಿ ಮನೆಗೆ ತೆರಳಿದರು.
ತಾವು ವಾಸವಿದ್ದ ಬಾಡಿಗೆ ಮನೆಗೆ ತೆರಳಿದ ಹರೀಶ್ ಬಂಗೇರ ಅವರನ್ನು ಆರತಿ ಬೆಳಗಿ ಮನೆಯವರು ಸ್ವಾಗತಿಸಿದರು. ಮನೆ ಒಳ ಪ್ರವೇಶಿಸುತ್ತಲೇ ದೇವರಿಗೆ ಕೈಮುಗಿದು ಪ್ರಾರ್ಥಿಸಿ ಆ ಬಳಿಕ ತಮ್ಮ ಮೂಲ ಮನೆಗೆ ತೆರಳಿ ತಾಯಿಯ ಆಶೀರ್ವಾದ ಪಡೆದರು.

ಗುರುವಾರ ಹರೀಶ್ ಬಂಗೇರ ಮನೆಗೆ ತೆರಳಿದ ಬಳಿಕ ಅಲ್ಲಿಂದ ನೇರವಾಗಿ ರಾಜ್ಯ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆಯವರ ಮನೆಗೆ ಭೇಟಿ ನೀಡಿ ಧನ್ಯವಾದ ತಿಳಿಸಿದರು. ತಾವು ಮರಳಿ ಮನೆಗೆ ಬರಲು ಜೆಪಿ ಹೆಗ್ಡೆಯವರ ಸಹಕಾರವನ್ನು ಸ್ಮರಿಸಿಕೊಂಡ ಹರೀಶ್ ಬಂಗೇರ ಜೆ.ಪಿ ಹೆಗ್ಡೆಯವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ಮುಂದಾದರು. ಈ ವೇಳೆ ಕಾಲಿಗೆ ಬೀಳದಂತೆ ತಡೆದ ಹೆಗ್ಡೆಯವರು ಆಲಂಗಿಸಿ ಮುಂದಿನ ಜೀವನಕ್ಕೆ ಶುಭಹಾರೈಸಿದರು.

2019ರ ಡಿ.21 ರಂದು ಹರೀಶ್ ಬಂಗೇರ ತನ್ನದಲ್ಲದ ತಪ್ಪಿಗೆ ಸೌದಿ ಅರೇಬಿಯಾದಲ್ಲಿ ಬಂಧಿತರಾಗಿದ್ದರು. ಸೌದಿಯಲ್ಲಿ ಕಳೆದ 1 ವರ್ಷ 8 ತಿಂಗಳ ಕಾಲ ಬಂಧನದಲ್ಲಿದ್ದ ಅವರು ನಿರಪರಾಧಿಯಾಗಿ ಬಿಡುಗಡೆಗೊಂಡು ಬುಧವಾರ ಬೆಂಗಳೂರಿಗೆ ಬಂದಿಳಿದಿದ್ದು, ಅಲ್ಲಿಂದ ರಾತ್ರಿ ಹುಟ್ಟೂರಿಗೆ ಆಗಮಿಸಿದ್ದಾರೆ. ಕಿಡಿಗೇಡಿಗಳು ಮಾಡಿದ ತಪ್ಪಿಗೆ ಸೌದಿ ಅರೇಬಿಯಾದ ಜೈಲಿನಲ್ಲಿದ್ದ ಕುಂದಾಪುರದ ಬೀಜಾಡಿಯ ಹರೀಶ್ ಬಂಗೇರ ಕೊನೆಗೂ ಬಿಡುಗಡೆಯಾಗಿದ್ದು ಕುಟುಂಬಿಕರಲ್ಲಿ ಸಂಭ್ರಮ ಮನೆಮಾಡಿದೆ.

 

Related Posts

Leave a Reply

Your email address will not be published.