ಪಚ್ಚನಾಡಿ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಮೇಯರ್ ಭೇಟಿ, ಪರಿಶೀಲನೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿಯಲ್ಲಿರುವ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಮತ್ತು ಪಿಲಿಕುಳದಲ್ಲಿರುವ ಟರ್ಶಿಯರಿ ಟ್ರೀಟ್ ಮೆಂಟ್ ಪ್ಲಾಂಟ್‍ಗೆ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಕಾರ್ಯಪಾಲಕ ಅಭಿಯಂತರ ಗುರುಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಚ್ಚನಾಡಿಯಲ್ಲಿರುವ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮೇಯರ್ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯೆ ನೀಡಿ, ಒಳಚರಂಡಿಯ ತ್ಯಾಜ್ಯ ನೀರನ್ನು ಎಸ್‍ಟಿಪಿ ಘಟಕದಲ್ಲಿ ಶುದ್ಧೀಕರಿಸುತ್ತಿದ್ದು ಈ ಶುದ್ಧೀಕೃತ ನೀರನ್ನು ಪಿಲಿಕುಳದಲ್ಲಿರುವ ಟಿ.ಟಿ.ಪಿ.ಗೆ ಬಿಡಲಾಗುತ್ತದೆ. ಅಲ್ಲಿ ಮತ್ತೆ ತ್ಯಾಜ್ಯ ನೀರನ್ನು ಸ್ವಚ್ಚ ನೀರನ್ನಾಗಿ ಪರಿವರ್ತಿಸಿ ಪಿಲಿಕುಳ ನಿಸರ್ಗ ಧಾಮದಲ್ಲಿ ಗಿಡಗಳಿಗೆ ನೀಡಲು ಬಳಸಲಾಗುತ್ತದೆ. ಪ್ರತಿ ದಿನ ಹೀಗೆ ಬರುವ 6.5 ಎಂ.ಎಲ್.ಡಿ ತ್ಯಾಜ್ಯ ನೀರನ್ನು ಪಿಲಿಕುಳಕ್ಕೆ ಪ್ರತಿ ನಿತ್ಯ ನೀಡಲಾಗುತ್ತಿದ್ದು, ಉಳಿದ ಎಸ್.ಟಿ.ಪಿ.ಯಿಂದ ಹರಿದ 2.2 ಎಂ.ಎಲ್.ಡಿ ಹೆಚ್ಚುವರಿ ನೀರನ್ನು ಪಾಲಿಕೆಯ ಸ್ವಾಭಾವಿಕ ನಾಲೆಯ ಮುಖಾಂತರ ಫಲ್ಗುಣಿ ನದಿಗೆ ಬಿಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಮೂಲಕ ತ್ಯಾಜ್ಯ ನೀರನ್ನು ಫಲ್ಗುಣಿ ನದಿಗೆ ಬಿಡುತ್ತಿರುವುದಾಗಿ ಸ್ವತಃ ಮೇಯರ್ ಹೇಳಿಕೊಂಡಂತಾಗಿದೆ.

ಪಚ್ಚನಾಡಿ ಘಟಕದಿಂದ ತ್ಯಾಜ್ಯ ನೀರನ್ನು ನೇರವಾಗಿ ಫಲ್ಗುಣಿ ನದಿಗೆ ಬಿಡಲಾಗುತ್ತಿದೆ ಎಂದು ಈ ಬಗ್ಗೆ ವಿ4 ನ್ಯೂಸ್ ವಾಹಿನಿಯು ಸಮಗ್ರ ವರದಿಯನ್ನು ಮಾಡಿ, ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಇದರ ಬಗ್ಗೆ ಸ್ಥಳೀಯ ಸಾರ್ವಜನಿಕರು ಹೋರಾಟ ನಡೆಸಿಕೊಂಡು ಬಂದರೂ, ಪಾಲಿಕೆಯಿಂದ ನಿರ್ಲಕ್ಷ್ಯವೇ ಉತ್ತರವಾಗಿತ್ತು. ಈ ಬಗ್ಗೆ ಸಿಎಂ ಕಚೇರಿಗೆ ಸ್ಥಳೀಯರು ಪತ್ರ ಬರೆದು, ಕುಡಿಯುವ ನೀರು ಬಳಸುವ ಅಣೆಕಟ್ಟಿಗೆ ತ್ಯಾಜ್ಯ ನೀರು ಸೇರುತ್ತಿರುವ ಬಗ್ಗೆ ಗಮನ ಸೆಳೆದಿದ್ದರು. ಸಿಎಂ ಕಚೇರಿಯಿಂದ ಮಂಗಳೂರು ಮಹಾನಗರ ಪಾಲಿಕೆಗೆ ಶಿಸ್ತು ಕ್ರಮ ಜರಗಿಸಲು ಸೂಚನೆ ಬಂದಿತ್ತು. ಸಿಎಂ ಕಚೇರಿಯ ಚಾಟಿಯಿಂದ ಎಚ್ಚೆತ್ತ ಪಾಲಿಕೆಯ ಅಧಿಕಾರಸ್ಥರು 15 ದಿನಗಳ ಬಳಿಕ ಪಚ್ಚನಾಡಿ ಘಟಕಕ್ಕೆ ಭೇಟಿ ನೀಡಿದ್ದಾರೆ.

ಇದೀಗ ಸ್ವತಃ ಸ್ಥಳಕ್ಕೆ ಮೇಯರ್ ಕೂಡ ತೆರಳಿ, ಅಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ. ಶುದ್ಧೀಕರಣಗೊಳಿಸಿದ ನೀರನ್ನು ಎಷ್ಟರ ಮಟ್ಟಿಗೆ ಶುದ್ಧ ಆಗಿದೆ ಎಂದು ಅಧಿಕಾರಿಗಳಿಂದಲೇ ಪರೀಕ್ಷೆಗೆ ನಡೆಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.

 

Related Posts

Leave a Reply

Your email address will not be published.