ಪುತ್ತೂರಿನಲ್ಲಿ ವಿದ್ಯಾರ್ಥಿಗೆ ಹಲ್ಲೆ ಆರೋಪ: ಬೈಕ್ ಸವಾರರು ಪೊಲೀಸ್ ವಶಕ್ಕೆ

ಪುತ್ತೂರು: ಕಾಲೇಜು ಬಿಟ್ಟು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಬೈಕ್ ಡಿಕ್ಕಿ ಹೊಡೆದುದನ್ನು ವಿಚಾರಿಸಿದ ವೇಳೆ ಆತನಿಗೆ ಹಲ್ಲೆ ನಡೆಸಿದ ಮತ್ತು ಇದನ್ನು ವಿಚಾರಿಸಲು ಬಂದಾತನಿಗೂ ಬೈಕ್ ಸವಾರರು ಹಲ್ಲೆ ನಡೆಸಿದ ಘಟನೆ ಅ.21ರಂದು ಸಂಜೆ ವೇಳೆ ಕೊಂಬೆಟ್ಟು ಸ.ಪ.ಪೂ ಕಾಲೇಜು ಬಳಿ ನಡೆದಿದೆ.

ತಾರಿಗುಡ್ಡೆ ಅಬ್ದುಲ್ ರಜಾಕ್‍ರವರ ಪುತ್ರ, ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಮಹಮ್ಮದ್ ಜಿಯಾದ್(16.ವ.) ಹಾಗೂ ಆತನ ರಕ್ಷಣೆಗೆ ಬಂದ ಜಿಡೆಕಲ್ಲು ಇಬ್ರಾಹಿಂರವರ ಪುತ್ರ ಮಹಮ್ಮದ್ ಇಜಾಜ್(23ವ.) ಹಲ್ಲೆಗೊಳಗಾದವರು. “ನಾನು ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದು ಸಂಜೆ 3.45ರ ವೇಳೆಗೆ ತರಗತಿ ಮುಗಿಸಿ ಕಾಲೇಜು ಹಿಂಭಾಗದ ರಸ್ತೆಯ ಮೂಲಕ ನಡೆದುಕೊಂಡು ಬರುತ್ತಿದ್ದೆ. ಇದೇ ಸಂದರ್ಭದಲ್ಲಿ ಎದುರಿನಿಂದ ಬಂದ ಎಫ್‍ಝಡ್ ಬೈಕ್(ಕೆಎ19ಇಜಿ7087) ನನಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾನು ರಸ್ತೆಗೆ ಎಸೆಯಲ್ಪಟ್ಟಿದ್ದೆ. ನನಗೆ ಡಿಕ್ಕಿ ಹೊಡೆದಿರುವ ಬಗ್ಗೆ ಬೈಕ್ ಸವಾರರಲ್ಲಿ ವಿಚಾರಿಸಿದ್ದೇನೆ. ಆಗ ಬೈಕ್‍ನಲ್ಲಿದ್ದ ಅಪರಿಚಿತರಿಬ್ಬರು ನನಗೆ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಅದೇ ರಸ್ತೆಯಲ್ಲಿ ಆಕ್ಟೀವಾದಲ್ಲಿ ಬಂದ ಮಹಮ್ಮದ್ ಇಜಾಜ್‍ರವರು ನನಗೆ ಹಲ್ಲೆ ನಡೆಸುತ್ತಿರುವುದರ ಕುರಿತು ಅಪರಿಚಿತರಲ್ಲಿ ವಿಚಾರಿಸಿದಾಗ ಬೈಕ್ ಸವಾರರು ಅವರಿಗೂ ಹಲ್ಲೆ ನಡೆಸಿದ್ದಾರೆ” ಎಂದು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ಮಹಮ್ಮದ್ ಜಿಯಾದ್ ತಿಳಿಸಿದ್ದಾರೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಬ್ಬರು ಬನ್ನೂರು ನೆಕ್ಕಿಲ ನಿವಾಸಿಗಳೆಂದು ತಿಳಿದು ಬಂದಿದೆ.

 

Related Posts

Leave a Reply

Your email address will not be published.