ಪುತ್ತೂರಿನಲ್ಲಿ ಶಿಕ್ಷಕರ ದಿನಾಚರಣೆ: ನಿವೃತ್ತ ಶಿಕ್ಷಕರಿಗೆ, ಸಾಧಕರಿಗೆ, ಅಧಿಕಾರಿಗಳಿಗೆ ಗೌರವ

ಪುತ್ತೂರು: ದ.ಕ.ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ನಿವೃತ್ತ ಶಿಕ್ಷಕರು, ಸಾಧಕ ವಿದ್ಯಾರ್ಥಿಗಳು ಹಾಗೂ ವಿವಿಧ ಅಧಿಕಾರಿ ವರ್ಗದವರನ್ನು ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಭಾನುವಾರ ಇಲ್ಲಿಯ ಪುರಭವನದಲ್ಲಿ ಆಚರಿಸಲಾಯಿತು.

ಸಮಾರಂಭದಲ್ಲಿ ತಾಲೂಕಿನ ವಿವಿಧ ಸರಕಾರಿ ಪ್ರಾಥಮಿಕ, ಅನುದಾನಿತ ಪ್ರೌಢಶಾಲೆಯ ಸುಮಾರು ೪೮ ಮಂದಿ ನಿವೃತ್ತ ಮುಖ್ಯ ಶಿಕ್ಷಕರು, ಸಹಾಯಕ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರನ್ನು ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಲಾಯಿತು. ಅಲ್ಲದೆ ಶಾಸಕರ ಸಂಜೀವ ಮಠಂದೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಜತೆ ಸಹಕಾರ ನೀಡಿದ ವಿವಿಧ ಇಲಾಖೆಯ ಅಧಿಕಾರಿಗಳನ್ನು ಪೇಟ ತೊಡಿಸಿ, ಶಾಲು ಹೊದಿಸಿ ಗೌರವಿಸಲಾಯಿತು. ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶ್ರೀಶ ಶರ್ಮ ಕೆ. ಹಾಗೂ ತನುಷಾ ರೈ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ 625 ರಲ್ಲಿ615 ಅಂಕ ಪಡೆದ ಆಶಿಶ್ ಕುಮಾರ್ ಬಿ., ಮಂಜುನಾಥ ಎಸ್. ಹಾಗೂ ವೇದಾಕ್ಷ ಅವರಿಗೆ ದತ್ತಿನಿಧಿ ಪುರಸ್ಕಾರ ನೀಡಲಾಯಿತು. ಟಿಜಿಟಿ ಶಿಕ್ಷಕ ವರ್ಗದಿಂದ ಕೊಡುಗೆಯಾಗಿ ಸರಕಾರಿ ಆಸ್ಪತ್ರೆಗೆ ನೀಡಲಾದ ಗಾಲಿಕುರ್ಚಿಯನ್ನು ಹಸ್ತಾಂತರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಅವರ ಕುರಿತು ರಚಿಸಿದ ಕೃತಿ ಹಾಗೂ ಧ್ವನಿಸುರುಳಿ “ಯಶೋಗಾಥೆ”, ಬಿಡುಗಡೆಗೊಳಿಸಲಾಯಿತು ಇದರ ಜತೆ ತಾರನಾಥ ಸವಣೂರು ಸಂಪಾದಕತ್ವದ “ಚಿಂತನಾಮೃತ” ಕೃತಿ ಹಾಗೂ ಧ್ವನಿಸುರುಳಿ, ಭರಮ ಶಿಕ್ಷಕರಿಂದ ಅರ್ಪಿತವಾದ “ಗುರುತ್ವ ನನ್ನ ಕನಸಿನ ತರಗತಿ” ಕೃತಿ ಮತ್ತು ಧ್ವನಿಸುರುಳಿ ಹಾಗೂ ಶಿಕ್ಷಕಿಯೊಬ್ಬರು ರಚಿಸಿದ “ಹಳ್ಳಿ ಮತ್ತು ಅಷ್ಟೋತ್ತರ” ಕೃತಿಯನ್ನು ಅನಾವರಣಗೊಳಿಸಲಾಯಿತು. ಶಿಕ್ಷಕರ ಸಮಸ್ಯೆ ಕುರಿತ ಕಿರುಚಿತ್ರವನ್ನು ಬಿಡುಗಡೆಗೊಳಿಸಲಾಯಿತು.

ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಪ್ರಸ್ತುತ ವಿದ್ಯಾರ್ಥಿ-ಶಿಕ್ಷಕರ ಸಂಬಂಧ ವ್ಯವಹಾರಿಕವಾಗಿದೆ, ವೃತ್ತಿಪರವಾಗಿದೆ. ಶಿಕ್ಷಕ ಎನಿಸಿದವನು ನಿಜವಾದ ಗುರುವಾಗಬೇಕಾದರೆ ಹಿಂದಿನ ಗುರು ಪರಂಪರೆ ಮರು ಸೃಷ್ಟಿಯಾಗಬೇಕು ಎಂದ ಅವರು, ದೇಶಕ್ಕಾಗಿ ಬದುಕಿದವರನ್ನು ಇಡೀ ದೇಶ ಇಂದು ಸ್ಮರಣೆ ಮಾಡುತ್ತಿದ್ದು, ಸ್ಮರಣೆಗೆ ಒಳಗಾಗುವ ಶಿಕ್ಷಕರನ್ನು ಮತ್ತೊಮ್ಮೆ ನಾಡಿನಲ್ಲಿ ಜನಿಸಬೇಕು. ಈ ಮೂಲಕ ಶಿಕ್ಷಕರಿಂದ ಶಿಕ್ಷಣದಲ್ಲಿ ಬದಲಾವಣೆಯಾಗಬೇಕು ಎಂದರು.

ಇನ್ನೋರ್ವ ಅತಿಥಿ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಮಾತನಾಡಿ, ಶಿಕ್ಷಕರು ಪ್ರಜಾಪ್ರಭುತ್ಸವ ಅವಿಭಾಜ್ಯ ಅಂಗವಾಗಿದ್ದು, ತನ್ನ ಶಿಕ್ಷಕ ಜೀವನದಲ್ಲಿ ಎಲ್ಲಾ ಆಯಾಮಗಳನ್ನು ಕಾಣುವವರು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ನಿಂತ ನೀರಾಗದೆ ಹರಿಯುವ ನೀರಿನಂತೆ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಎಂದರು.

ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ., ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್., ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಪಾಲ್ಗೊಂಡಿದ್ದರು

 

 

Related Posts

Leave a Reply

Your email address will not be published.