ಪ್ರಾಮಾಣಿಕತೆ ಮೆರೆದ ಆಟೋ ರಿಕ್ಷಾ ಚಾಲಕ

ರಸ್ತೆ ಬದಿಯಲ್ಲಿ ಸಿಕ್ಕಿದ್ದ ಪರ್ಸ್‌ನ್ನು ಪೊಲೀಸರಿಗೆ ಒಪ್ಪಿಸಿ, ತನ್ಮೂಲಕ ಸೊತ್ತಿನ ಮಾಲಕರಿಗೆ ತಲುಪಿಸಿ ಇಲ್ಲಿನ ರಿಕ್ಷಾ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇಂತಹ ಪ್ರಾಮಾಣಿಕತೆಗೆ ಮಂಗಳೂರು ಮತ್ತೊಮ್ಮೆ ಸಾಕ್ಷಿಯಾಗಿದೆ. ಆಟೊರಿಕ್ಷಾ ಚಾಲಕ ಮುಹಮ್ಮದ್ ಹನೀಫ್ ಎಂಬವರೇ ಪರ್ಸ್‌ನ್ನು ಮರಳಿಸಿದವರು

ಮುಹಮ್ಮದ್ ಹನೀಫ್ ಸುಮಾರು 15 ವರ್ಷಗಳಿಂದ ನಗರದಲ್ಲಿ ಆಟೊ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂದಿನಂತೆ ತನ್ನ ಕಾಯಕದಲ್ಲಿ ನಿರತನಾಗಿದ್ದ ಹನೀಫ್, ಶುಕ್ರವಾರ ಬೆಳಗ್ಗೆ 9:30ರ ಸುಮಾರಿಗೆ ನಗರದ ಅತ್ತಾವರದ ರಸ್ತೆ ಕಡೆಗೆ ತೆರಳುತ್ತಿದ್ದರು. ಬಿಗ್ ಬಝಾರ್ ಮಳಿಗೆ ಸಮೀಪಿಸುತ್ತಿದ್ದಂತೆ ರಸ್ತೆ ಬದಿ ಪರ್ಸ್ ಬಿದ್ದಿರುವುದು ಕಂಡುಬಂದಿದೆ. ರಿಕ್ಷಾ ನಿಲ್ಲಿಸಿ, ಪರ್ಸ್ ಎತ್ತಿಕೊಂಡು ನೋಡಿದಾಗ 10,200 ರೂ. ನಗದು, ಎಟಿಎಂ, ಆಧಾರ್ ಕಾರ್ಡ್ ಸಹಿತ ಮಹತ್ವದ ದಾಖಲೆಗಳು ಅದರೊಳಗೆ ಇರುವುದು ಪತ್ತೆಯಾಗಿದೆ. ಕೂಡಲೇ ತನ್ನ ರಿಕ್ಷಾದಲ್ಲಿ ಪರ್ಸ್ ತೆಗೆದುಕೊಂಡು ಬಂದು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಒಪ್ಪಿಸಿ, ಪ್ರಾಮಾಣಿಕತೆ ಮೆರೆದಿದ್ದಾರೆ.

ಚಾಲಕ ಮುಹಮ್ಮದ್ ಹನೀಫ್ ತನಗೆ ಸಿಕ್ಕಿದ್ದ ಪರ್ಸ್‌ನ್ನು ನಗರದ ಶಾಲೆಯೊಂದರ ವಿದ್ಯಾರ್ಥಿ ದುಷ್ಯಂತ್ ಅವರಿಗೆ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಮ್ಮುಖದಲ್ಲಿ ಮರಳಿಸಿದರು. ನಂತರ ಚಾಲಕ ಮುಹಮ್ಮದ್ ಹನೀಫ್ ಅವರಿಗೆ ಮಂಗಳೂರು ಪೊಲೀಸ್ ಆಯುಕ್ತಾಲಯದಿಂದ ಕಮಿಷನರ್ ಶಶಿಕುಮಾರ್ ಸನ್ಮಾನಿಸಿದರು.

Related Posts

Leave a Reply

Your email address will not be published.