ಬಂಟ್ವಾಳ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಅಪಾರ ಹಾನಿ

ಬಂಟ್ವಾಳ: ಮಂಗಳವಾರ ಸುರಿದ ಭಾರಿ ಮಳೆಗೆ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿ ಉಂಟಾಗಿ ನಷ್ಟ ಸಂಭವಿಸಿದೆ. ಅರಳ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ತಡೆಗೋಡೆ ಕುಸಿದು ಬಿದ್ದು ಜನಹಿತಾಯ ವಿದ್ಯಾಸಂಸ್ಥೆಗೆ ಸೇರಿದ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿದೆ.

ಸಜೀಪನಡು ಗ್ರಾಮದ ದೇರಾಜೆ ಬರೆ ಎಂಬಲ್ಲಿ ಲೀಲಾ ಸಂಜೀವ ಪೂಜಾರಿಯವರ ಮನೆ ಸಮೀಪದ ಗುಡ್ಡ ಜರಿದು ಬಿದ್ದು ಮನೆಯ ಸುತ್ತ ಆವರಿಸಿಕೊಂಡಿದೆ. ಅರಳ ಗ್ರಾಮದ ಸುಂದರ ಎಂಬವರ ಮನೆಯ ಮೇಲೆ ಆವರಣ ಗೋಡೆ ಕುಸಿದು ಮನೆಗೆ ಭಾಗಶಃ ಹಾನಿಯಾಗಿದೆ. ಬಾಳ್ತಿಲ ಗ್ರಾಮದ ಸುಧೆಕಾರ್ ಎಂಬಲ್ಲಿ ಸೇಸಪ್ಪ ನಾಯ್ಕ್ ಎಂಬವರ ಮನೆಯ ಹಿಂಬದಿಯ ಗುಡ್ಡ ಜರಿದಿದೆ. ಅರಳ ಗ್ರಾಮದ ಅಲ್ಮುಡೆ ಎಂಬಲ್ಲಿ ಚಂದ್ರಾವತಿ ಉಮೇಶ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಬಿದ್ದಿದೆ. ಅನಂತಾಡಿ ಗ್ರಾಮದ ಬಾಕಿಲ ಎಂಬಲ್ಲಿ ವಾಣಿ ಲಕ್ಷ್ಮಣ ಎಂಬರ ಮನೆಯಂಗಳದ ಕಾಂಕ್ರೀಟನ ತಡೆಗೋಡೆಯು ಬಿದ್ದು ಬಾಳೆ ಗಿಡಗಳಿಗೆ ಹಾನಿ ಉಂಟಾಗಿದೆ. ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ಮೇಲಿನ ಮನೆಯ ಆವರಣ ಗೋಡೆ ಕುಸಿದು ಚಿರಾವತಿ ಕೃಷ್ಣಪ್ಪ ಎಂಬವರ ಮನೆ ಹಾನಿಯಾಗಿದೆ. ಅದೃಷ್ಟವಶಾತ್ ಮನೆಮಂದಿ ಪ್ರಾಣಾಪಯದಿಂದ ಪಾರಾಗಿದ್ದಾರೆ. ಮನೆಯವರನ್ನು ಸಂಬಂಧಿಗಳ ಮನೆಗೆ ಸ್ಥಳಾಂತರಿಸಲಾಗಿದೆ. ಸರಪಾಡಿ ಗ್ರಾಮದ ಉಜಿರಾಡಿ ಎಂಬಲ್ಲಿ ಐತಪ್ಪ ಪೂಜಾರಿ ಎಂಬವರ ಮನೆ ಬದಿಯ ತಡೆಗೋಡೆ ಮಳೆಗೆ ಕುಸಿದು ಬಿದ್ದಿದೆ.

 

Related Posts

Leave a Reply

Your email address will not be published.