ಮಂಗಳೂರಿನಲ್ಲಿ ಅನ್‌ಲಾಕ್ ಬಳಿಕ ಟ್ರಾಫಿಕ್ ಜಾಮ್

ಮಂಗಳೂರು ನಗರದಲ್ಲಿ ಲಾಕ್‌ಡೌನ್ ಸಂದರ್ಭ ರಸ್ತೆಯ ದುರಸ್ತಿ ಕಾರ್ಯ ಮಾಡಲು ಸಾಕಷ್ಟು ಸಮಯಾವಕಾಶ ಇದ್ದರೂ, ಇದೀಗ ಅನ್‌ಲಾಕ್ ಆದ ಬಳಿಕ ಹೆದ್ದಾರಿ ಇಲಾಖೆ  ಕೂಳೂರು ಬಳಿ ಇಂಟರ್ ಲಾಕ್ ಕಾಮಗಾರಿಯನ್ನು ನಡೆಸುತ್ತಿದ್ದು, ಟ್ರಾಫಿಕ್ ಜಾಮ್‌ಗೆ ಪ್ರತ್ಯಕ್ಷ ಕಾರಣವಾಯಿತು.
ಮಳೆ ನೀರು ನಿಂತು ಸೇತುವೆ ದಕ್ಷಿಣ ಭಾಗದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಇಂದಯ ಇಂಟರ್‌ಲಾಕ್ ಕಾಮಗಾರಿ ನಡೆಸುವ ಉದ್ದೇಶದಿಂದ ಸೇತುವೆ ಬಂದ್ ಮಾಡಲಾಯಿತು. ಇದರಿಂದ ಹೊಸ ಸೇತುವೆಯಲ್ಲಿಯೇ ಮಂಗಳೂರು-ಉಡುಪಿ ಸಂಚಾರಕ್ಕೆ ದ್ವಿಮುಖವಾಗಿ ಅವಕಾಶ ನೀಡಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಯಿತು.
ಶನಿವಾರ ವಾರಾಂತ್ಯದ ಕರ್ಫ್ಯೂ ಇದ್ದರೂ ಪಣಂಬೂರು ಕೂಳೂರು ಕೆಪಿಟಿ ವರೆಗೆ ಟ್ರಾಫಿಕ್ ಜಾಂ ಆಯಿತು. ಕೊರೊನಾ ಸಂದರ್ಭದ ಈ ತುರ್ತು ಸ್ಥಿತಿಯಲ್ಲಿ ಹಲವಾರು ಆಂಬುಲೆನ್ಸ್, ಕಾಮಗಾರಿಯಿಂದಾಗಿ ಟ್ರಾಫಿಕ್ ಜಾಂ ನಲ್ಲಿ ಸಿಲುಕಿ ಒದ್ದಾಡಿದರೆ, ವಿಮಾನ ನಿಲ್ದಾಣಕ್ಕೆ ಹೋಗುವವರು ವಿಮಾನ ಕೈ ತಪ್ಪುವ ಮೂಲಕ ಹೆದ್ದಾರಿ ಇಲಾಖೆಯ ಎಡವಟ್ಟಿಗೆ ಹಿಡಿಶಾಪ ಹಾಕಿದರು. ಬಸ್ ಸಂಚಾರ ಆರಂಭವಾಗಿ ಕೇವಲ 2 ದಿನವಾಗಿದ್ದು ನಿಮಿಷಕ್ಕೊಂದರಂತೆ ಓಡಾಡುವ ಬಸ್‌ಗಳು ಟ್ರಾಫಿಕ್ ಜಾಂನಿಂದಾಗಿ ತಮ್ಮ ಟ್ರಿಪ್‌ಗಳನ್ನು ನಿಲ್ಲಿಸಿ ಮತ್ತಷ್ಟು ನಷ್ಟಕ್ಕೆ ಒಳಗಾಗಬೇಕಾಯಿತು. ಕಳೆದ ಹಲವಾರು ವಾರಗಳಿಂದ ಲಾಕ್‌ಡೌನ್ ಇದ್ದು ಈ ಸಂದರ್ಭ ಇಲ್ಲವೇ ರಾತ್ರಿ ವೇಳೆ ಕಾಮಗಾರಿ ನಡೆಸಬಹುದಾಗಿದ್ದರೂ ಹೆದ್ದಾರಿ ಇಲಾಖೆಯ  ಬೇಜಾವಬ್ದಾರಿ ನಡೆಗೆ ಕೂಳೂರು ನಾಗರಿಕ ಹಿತರಕ್ಷಣಾ ಸಮಿತಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. 

 

Related Posts

Leave a Reply

Your email address will not be published.