ಮಂಗಳೂರಿನ ಹಂಪನಕಟ್ಟೆಯಲ್ಲಿ ತೈಲ ಬೆಲೆ ಏರಿಕೆ ವಿರುದ್ಧ CPIM ಪ್ರತಿಭಟನೆ

ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ವಿಪರೀತ ಬೆಲೆಯೇರಿಕೆಯನ್ನು ಖಂಡಿಸಿ CPIM ನೇತ್ರತ್ವದಲ್ಲಿ ಮಂಗಳೂರು ನಗರದಾದ್ಯಂತ ವಾರಾಚರಣೆ ನಡೆಯತ್ತಿದ್ದು, ಇಂದು ನಗರದ ಹ್ರದಯ ಭಾಗವಾದ ಹಂಪನಕಟ್ಟಾ ಪ್ರದೇಶದಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.ಬೆಲೆಯೇರಿಕೆಗೆ ಕಾರಣವಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ತಪ್ಪು ಆರ್ಥಿಕ ನೀತಿಗಳ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ಭರಿತರಾಗಿ ಘೋಷಣೆಗಳನ್ನು ಕೂಗುವ ಮೂಲಕ ಸರಕಾರದ ಕ್ರಮವನ್ನು ಖಂಡಿಸಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ CPIM ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು, ಜಾತಿ ಧರ್ಮದ ಹೆಸರಿನಲ್ಲಿ ದೇಶ ಒಡೆಯುವವರು ಅಧಿಕಾರಕ್ಕೆ ಬಂದರೆ ಏನಾಗಬಹುದು ಎಂಬುದು ಇಂದು ಜಗಜ್ಜಾಹೀರಾಗಿದೆ.ಜನರ ಬದುಕಿನ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ,ಜನರ ಪ್ರಾಣಗಳ ಜೊತೆ ಚೆಲ್ಲಾಟವಾಡುವ ನರೇಂದ್ರ ಮೋದಿ ಸರಕಾರದ ಅಚ್ಚೇದಿನ್ ಬಂದಿರುವುದು ಅಧಾನಿ ಅಂಬಾನಿಗೆಯೇ ಹೊರತು ಈ ದೇಶದ ಜನಸಾಮಾನ್ಯರಿಗಲ್ಲ ಎಂದು ಕೇಂದ್ರ ಸರಕಾರವನ್ನು ತೀವ್ರವಾಗಿ ಟೀಕಿಸಿದರು.

CPIM ಯುವನಾಯಕರಾದ ಸಂತೋಷ್ ಬಜಾಲ್ ರವರು ಮಾತನಾಡುತ್ತಾ, ನರೇಂದ್ರ ಮೋದಿ ಸರಕಾರವು ಅಧಿಕಾರಕ್ಕೇರುವ ಮುನ್ನ ದೇಶದ ಯುವಜನರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದು,ಕಳೆದ 7 ವರ್ಷದಲ್ಲಿ ಒಂದೇ ಒಂದು ಉದ್ಯೋಗವನ್ನು ಸ್ರಷ್ಠಿಸದೆ ಯುವಜನತೆಗೆ ಮೋಸ ಮಾಡಿದೆ ಎಂದು ಹೇಳಿದರು.CPIM ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ಗಾಯದ ಮೇಲೆ ಬರೆ ಎಳೆದಂತೆ ರಾಜ್ಯ ಸರಕಾರವೂ ಕೂಡ ವಿದ್ಯುತ್ ದರವನ್ನು ವಿಪರೀತವಾಗಿ ಏರಿಸಿ ಜನತೆಗೆ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ.ಇಂತಹ ಸರಕಾರ ಗಳನ್ನು ಅಧಿಕಾರದಿಂದ ಕಿತ್ತೊಗೆಯುವ ತನಕ ಜನತೆ ಒಂದಾಗಿ ಹೋರಾಡಬೇಕಾಗಿದೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ CPIM ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿ, ಮಂಗಳೂರು ನಗರ ಮುಖಂಡರಾದ ದಿನೇಶ್ ಶೆಟ್ಟಿ, ಭಾರತಿ ಬೋಳಾರ,ಶಶಿಧರ್ ಶಕ್ತಿನಗರ,ಉಮೇಶ್ ಶಕ್ತಿನಗರ, ಮುಸ್ತಫಾ, ಹರೀಶ್ ಪೂಜಾರಿ, ನಾಗೇಶ್ ಕೋಟ್ಯಾನ್,ಸುಮತಿ ಅಡ್ಯಾರ್ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.