ಮಂಗಳೂರಿನ ಹಲವೆಡೆ ಬೆಲೆ ಏರಿಕೆ ವಿರುದ್ಧ ಸಿಪಿಐಂ ವತಿಯಿಂದ ಪ್ರತಿಭಟನೆ

ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಖಂಡಿಸಿ CPIM ನೇತ್ರತ್ವದಲ್ಲಿ ಮಂಗಳೂರು ನಗರದಾದ್ಯಂತ ನಡೆಯುತ್ತಿರುವ ವಾರಾಚರಣೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು,ಇಂದು ನಗರದ ಜಪ್ಪಿನಮೊಗರು, ಜಲ್ಲಿಗುಡ್ಡ,ಕಾವೂರು,ಶಕ್ತಿನಗರ ಸೇರಿದಂತೆ ಹಲವಾರು ಕಡೆಗಳಲ್ಲಿ ಪ್ರತಿಭಟನೆಗಳು ಜರುಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಜಪ್ಪಿನಮೊಗರುನಲ್ಲಿ CPIM ಮಹಿಳಾ ಕಾರ್ಯಕರ್ತೆಯರು ಬೆಲೆಯೇರಿಕೆಯಿಂದಾಗಿ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿದಾಗ ಸಾರ್ವಜನಿಕರು ಪಕ್ಷಭೇಧ ಮರೆತು ಬೆಂಬಲಿಸಿದರು.ಈ ಸಂದರ್ಭದಲ್ಲಿ CPIM ರಾಜ್ಯ ನಾಯಕರಾದ ಜೆ.ಬಾಲಕ್ರಷ್ಣ ಶೆಟ್ಟಿ, ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿಯವರು ಮಾತನಾಡಿ,ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ಜನತೆಗೆ ವಿವರಿಸಿದರು.

ಬಜಾಲ್ ವಾರ್ಡಿನ ಜಲ್ಲಿಗುಡ್ಡ ಯಲ್ಲಿ ಜರುಗಿದ ಪ್ರತಿಭಟನೆ ಯಲ್ಲಿ CPIM ಮಂಗಳೂರು ನಗರ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಸುರೇಶ್ ಬಜಾಲ್ ರವರು ಮಾತನಾಡುತ್ತಾ,ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದ ಬಿಜೆಪಿ ಸರಕಾರಗಳನ್ನು ಬುಡ ಸಮೇತ ಕಿತ್ತೊಗೆಯಬೇಕೆಂದು ಕರೆ ನೀಡಿದರು.

ಶಕ್ತಿನಗರದಲ್ಲಿ ಜರುಗಿದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ CPIM ನಾಯಕರಾದ ಜೆ.ಬಾಲಕ್ರಷ್ಣ ಶೆಟ್ಟಿ, ಶಶಿಧರ್ ಶಕ್ತಿನಗರರವರು ಮಾತನಾಡಿ,ಮುಂಬರುವ ದಿನಗಳಲ್ಲಿ ಜನ ಚಳುವಳಿಯನ್ನು ಬಲಿಷ್ಠವಾಗಿ ಕಟ್ಟಲು ಕರೆ ನೀಡಿದರು.

ಕಾವೂರಿನಲ್ಲಿ ಜರುಗಿದ ಪ್ರತಿಭಟನೆ ಯಲ್ಲಿ CPIM ಮಂಗಳೂರು ನಗರ ಉತ್ತರ ಕಾರ್ಯದರ್ಶಿ ದಯಾನಂದ ಶೆಟ್ಟಿ ಹಾಗೂ CPIM ಯುವ ನಾಯಕರಾದ ನವೀನ್ ಕೊಂಚಾಡಿಯವರು ಮಾತನಾಡಿ,ಜಾತಿ ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ದೇಶದ್ರೋಹಿಗಳ ವಿರುದ್ದ ದೇಶವನ್ನು ಉಳಿಸಲು ಸಮಸ್ತ ಜನತೆ ಒಂದಾಗಬೇಕೆಂದು ಹೇಳಿದರು.

ವಿವಿಧ ಕಡೆಗಳಲ್ಲಿ ಜರುಗಿದ ಪ್ರತಿಭಟನೆಯ ನೇತ್ರತ್ವವನ್ನು CPIM ನಾಯಕರಾದ ಜಯಲಕ್ಷ್ಮಿ, ಬೇಬಿ ಸೇನವ, ಹೇಮಾವತಿ,ಬಶೀರ್ ಜಲ್ಲಿಗುಡ್ಡ, ಉಮ್ಮರಬ್ಬ,ಮೋಹನ್, ಉಮೇಶ್ ಶಕ್ತಿನಗರ,ರವಿಚಂದ್ರ ಕೊಂಚಾಡಿ,ತಿಮ್ಮಯ್ಯ, ಸಂತೋಷ್ ಡಿಸೋಜ, ಮುಸ್ತಫಾ, ನೌಷಾದ್ ಪಂಜಿಮೊಗರು ಮುಂತಾದವರು ವಹಿಸಿದ್ದರು

 

Related Posts

Leave a Reply

Your email address will not be published.