ಮಂಗಳೂರು: ಭಜನಾ ಮಂದಿರಕ್ಕೆ ನುಗ್ಗಿ ಕಾಣಿಕೆ ಡಬ್ಬಿ ಕಳವು; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಮಂಗಳೂರು: ನಗರದ ನೀರುಮಾರ್ಗದ ಜಂಕ್ಷನ್ ಸಮೀಪದಲ್ಲಿರುವ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರಕ್ಕೆ ನುಗ್ಗಿದ ಇಬ್ಬರು ಕಳ್ಳರು ಕಾಣಿಕೆ ಡಬ್ಬಿ ಕಳವುಗೈದಿರುವ ಘಟನೆ ಬುಧವಾರ ನಸುಕಿನ ವೇಳೆ ನಡೆದಿದೆ. ಇದರ ಸಂಪೂರ್ಣ ದೃಶ್ಯ ಭಜನಾ ಮಂದಿರದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ಭಜನಾ ಮಂದಿರದ ಮುಂಭಾಗಕ್ಕೆ ನಸುಕಿನ ವೇಳೆ 1.45ರ ಸುಮಾರಿಗೆ ಆಗಮಿಸಿರುವ ಕಳ್ಳರು ಮುಂಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿದ್ದಾರೆ‌. ಬಳಿಕ ಉತ್ತರದ ಬಾಗಿಲು ತೆರೆದು ಪ್ರಧಾನ ಗುಡಿಯ ಮುಂಭಾಗದಲ್ಲಿರುವ ಕಾಣಿಕೆ ಡಬ್ಬಿಯನ್ನು ಹೊರಗೆ ಸಾಗಿಸಿದ್ದಾರೆ. ಕೆಲವು ಹೊತ್ತಿನ ಬಳಿಕ ಒಬ್ಬಾತ ಹರಿತವಾದ ಅಸ್ತ್ರವೊಂದರಿಂದ ಗರ್ಭಗುಡಿಯ ಬಾಗಿಲು ಮುರಿದು ಜಾಲಾಡಿದ್ದಾನೆ. ಕಾಣಿಕೆ ಡಬ್ಬಿಯಲ್ಲಿ ಮೂರೂವರೆ ಸಾವಿರ ರೂ.ಗೂ ಅಧಿಕ ಕಾಣಿಕೆ ಹಣ ಇತ್ತೆಂದು ತಿಳಿದು ಬಂದಿದೆ.

ಆರೋಪಿಗಳು ನಸುಕಿನ ವೇಳೆ 2.15ರಿಂದ 2.30ರ ಅಂತರದಲ್ಲಿ ಮಂದಿರದೊಳಗೆ ಪ್ರವೇಶಿಸಿ ಕಳವು ಕೃತ್ಯ ನಡೆಸಿದ್ದಾರೆ. ಕಳ್ಳರ ಚಲನವಲನಗಳ ಸುಮಾರು 45ನಿಮಿಷಗಳ ವೀಡಿಯೋ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಕೃತ್ಯದಲ್ಲಿ ಮೇಲ್ನೋಟಕ್ಕೆ ಇಬ್ಬರು ಶಾಮೀಲಾಗಿರುವುದು ತಿಳಿದು ಬಂದಿದೆ. ಚಪ್ಪಲಿ ಹಾಕಿಕೊಂಡೇ ಭಜನಾ ಮಂದಿರದ ಪ್ರಧಾನ ಗುಡಿ ಪ್ರವೇಶಿಸಿರುವುದು ಭಕ್ತಾದಿಗಳ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಇನ್ ಸ್ಪೆಕ್ಟರ್ ಜಾನ್ಸನ್ ಮತ್ತು ಸಿಬ್ಬಂದಿ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published.