ಯುಪಿಸಿಎಲ್ ಅವಾಂತರ, ಕೃಷಿ ಚಟುವಟಿಕೆಗಳು ನಾಶ:ಉಚ್ಚಿಲ ಬಡಾ ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ

ನಿರಂತರವಾಗಿ ಜನರಿಗೆ ತೊಂದರೆ ನೀಡುತ್ತಾ ಬಂದಿರುವ ಯುಪಿಸಿಎಲ್ ಕಂಪನಿಯ ಅವಾಂತರದಿಂದಾಗಿ ಕೃಷಿ ಚಟುವಟಿಕೆ ನಡೆಸಿದ ಗದ್ದೆಯಲ್ಲಿ ನೀರು ನಿಂತು ಕೃಷಿ ನಾಶವಾಗುತ್ತಿದ್ದು, ಈ ಬಗ್ಗೆ ಸ್ಥಳೀಯಾಢಳಿತ ಸಹಿತ ಯುಪಿಸಿಎಲ್ ಕಂಪನಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಆ ನಿಟ್ಟಿನಲ್ಲಿ ನಮ್ಮ ಬದುಕಿಗಾಗಿ ಪ್ರತಿಭಟಿಸುವುದು ಅನಿವಾರ್ಯ ಎಂಬುದಾಗಿ ಉಚ್ಚಿಲ ಬಡಾ ಗ್ರಾಮದ ಸಂತ್ರಸ್ಥ ರೈತರು ಎಚ್ಚರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಆಕ್ರೋಶ ವ್ಯಕ್ತ ಪಡಿಸಿದ ಗ್ರಾಮಸ್ಥರು, ನಾವು ನಮ್ಮ ಹಿರಿಯರ ಕಾಲದಿಂದಲೂ ಈ ಭಾಗದ ನೂರಾರು ಎಕ್ರೆ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಿ ಜೀವನ ಸಾಗಿಸುತ್ತಿದ್ದೇವು, ಆದರೆ ಇತ್ತೀಚಿನ ವರ್ಷಗಳಲ್ಲಿ ಅಂದರೆ ಜನವಿರೋಧಿ ಯುಪಿಸಿಎಲ್ ಈ ಭಾಗಕ್ಕೆ ಕಾಲಿಟ್ಟ ದಿನಗಳಿಂದ ಕೃಷಿಕರಾದ ನಮಗೆ ಸಮಸ್ಯೆ ಆರಂಭಗೊಂಡಿದೆ. ಕಂಪನಿ ಸಮುದ್ರಕ್ಕೆ ಪೈಪ್ ಲೈನ್ ಅಳವಡಿಸುವ ಸಂದರ್ಭ ಎತ್ತರವಾಗಿ ಪೈಪ್ ಗಳನ್ನು ಜೋಡಿಸಿರುವುದರಿಂದ ನಮ್ಮ ಕೃಷಿ ಭೂಮಿಗಳಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೆ ಕೃಷಿ ಗದ್ದೆಯಲ್ಲಿ ನೀರು ನಿಂತು ನಾವು ಮಾಡಿದ ಕೃಷಿ ಚಟುವಟಿಕೆಗಳು ಕೊಳೆತು ನಾಶವಾಗುತ್ತಿದೆ. ಈ ಬಗ್ಗೆ ಸ್ಥಳೀಯ ಗ್ರಾ.ಪಂ.ಗೆ ತಿಳಿಸಿದರೆ ಕಂಪನಿಯಿಂದ ಈ ಸಮಸ್ಯೆ ಉದ್ಭವವಾಗಿದೆ ಮಾತನಾಡುತ್ತೇವೆ ನೋಡೋಣ ಎಂಬುದಾಗಿ ನಮಗೆ ಉಪಯೋಗವೇ ಇಲ್ಲದ ಪಕ್ಕದ ಚರಂಡಿಯೊಂದನ್ನು ಕ್ಲೀನ್ ಮಾಡಿ ಹೋಗಿದ್ದಾರೆ. ಕಂಪನಿಯ ಗಮನಕ್ಕೆ ತಂದರೆ ನಾವು ಇಂಜಿನಿಯರ್ ಸಹಿತ ಅಗೆಯುವ ಯಂತ್ರವನ್ನು ಕಳುಹಿಸುತ್ತೇವೆ ಎಂಬುದಾಗಿ ಹೋದವರು ನಾಪತ್ತೆಯಾಗಿ ಅದೇಷ್ಟೋ ವರ್ಷಗಳೇ ಕಳೆದು ಹೋಗಿದೆ. ತಕ್ಷಣವೇ ಸ್ಥಳೀಯಾಡಳಿತ ಸಹಿತ ಕಂಪನಿ ಜಂಟಿಯಾಗಿ ಕಾಮಗಾರಿ ನಡೆಸಿ ಮಳೆನೀರು ಸರಾಗವಾಗಿ ಹರಿಯುವಂತೆ ಮಾಡುವ ಮೂಲಕ, ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ನಮ್ಮ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂಬುದಾಗಿ ಎಚ್ಚರಿಸಿದ್ದಾರೆ.

 

Related Posts

Leave a Reply

Your email address will not be published.